
ಮೈಸೂರು, ಆ.12-ದೇಶದ ಮುಂದಿನ ಅಧಿಕಾರವನ್ನು ಪ್ರಾಂತೀಯ ಪಕ್ಷಗಳು ಹಿಡಿಯಲಿವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಶಾಸಕ ಎಚ್.ವಿಶ್ವನಾಥ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಕೊಟ್ಟ ಮಾತಿನಂತೆ ನಡೆಯುತ್ತಿಲ್ಲ. ಬರಿ ಮನ್ ಕಿ ಬಾತ್ ಆಗಿದೆ ಎಂದು ತಿಳಿಸಿದರು.
ಮೋದಿಯವರದು ಕೇವಲ ಆಕಾಶವಾಣಿ, ದೂರದರ್ಶನದಲ್ಲಿ ಮಾತನಾಡುವುದು ಬಿಟ್ಟರೆ ಕಾಮ್ ಕಿ ಬಾತ್ ಏನೂ ಇಲ್ಲ ಎಂದು ಟೀಕಿಸಿದರು.
ಮೋದಿಯವರ ಆಡಳಿತ ಧೋರಣೆ ಹೇಗಿದೆ ಎಂದರೆ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೇನೆ ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ಉರುಳಿಬಿದ್ದಿರುವುದು ಗೊತ್ತಿಲ್ಲ. ಇಂತಹ ಆಡಳಿತ ನಡೆಸ್ತಿದ್ದಾರೆ ಎಂದು ಗೇಲಿ ಮಾಡಿದರು.
ಸ್ವತಂತ್ರ ಭಾರತವನ್ನು ಸ್ಪಂದಿಸುವಂತಹ ಕೆಲಸ ಕೇಂದ್ರದಿಂದ ಆಗುತ್ತಿಲ್ಲ. ಹಾಗಾಗಿ ದೇಶದ ಜನತೆಯ ಒಲವು ಪ್ರಾಂತೀಯ ಪಕ್ಷಗಳತ್ತ ಹೊರಳಿದೆ. ಇದರಿಂದಾಗಿ ಮುಂದಿನ ಚುನಾವಣೆಯಲ್ಲಿ ಪ್ರಾಂತೀಯ ಪಕ್ಷಗಳು ವಿಜೃಂಭಿಸಿ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯಲಿವೆ ಎಂದು ಭವಿಷ್ಯ ನುಡಿದರು.
ರಾಜ್ಯದಲ್ಲಿ ಪ್ರಾಂತೀಯ ಪಕ್ಷಗಳ ಯುಗ ಆರಂಭವಾಗಿದೆ. ಹಲವು ಪಕ್ಷಗಳು ರಾಜ್ಯದಲ್ಲಿ ಹುಟ್ಟಿಕೊಂಡಿದ್ದವು. ಹಾಗೆಯೇ ಮರೆಯಾದವು. ಆದರೆ, ದೇವೇಗೌಡರ ನೇತೃತ್ವದ ಜೆಡಿಎಸ್ ಮಾತ್ರ ಬೆಳೆದು ಬಂದಿದೆ ಎಂದರು.
ನನ್ನನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವುದರಿಂದ ರಾಜ್ಯದಲ್ಲಿ ಒಂದು ಉತ್ತಮ ಪ್ರಾಂತೀಯ ಪಕ್ಷದ ಯುವ ಪಡೆಯನ್ನು ಕಟ್ಟಲು ಮುದಾಗಿದ್ದೇನೆ. ಜೆಡಿಎಸ್ ತೊರೆದಿರುವಂತಹ ಹಲವಾರು ಯುವಕರನ್ನು ಈಗಾಗಲೇ ನಾನ ಸಂಪರ್ಕಿಸಿದ್ದು, ಅವರೆಲ್ಲರನ್ನು ಮರಳಿ ಪಕ್ಷಕ್ಕೆ ಬರಮಾಡಿಕೊಳ್ಳಲು ಉತ್ಸುಕನಾಗಿದ್ದೇನೆ ಎಂದು ವಿಶ್ವನಾಥ್ ತಿಳಿಸಿದರು.
ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರದಲ್ಲೂ ಕೂಡಾ ಪ್ರಾಂತೀಯ ಪಕ್ಷಗಳೇ ಅಧಿಕಾರದ ಚುಕ್ಕಾಣಿ ಹಿಡಿದಿವೆ. ನಮ್ಮ ರಾಜ್ಯದಲ್ಲೂ ಕೂಡಾ ಪ್ರಾಂತೀಯ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಗೂ ಮುನ್ನ ಅಧ್ಯಕ್ಷರಾಗಿರುವುದಕ್ಕೆ ಜಿಲ್ಲಾ ಜೆಡಿಎಸ್‍ವತಿಯಿಂದ ವಿಶ್ವನಾಥ್ ಅವರನ್ನು ಸನ್ಮಾನಿಸಲಾಯಿತು.