ಬೆಂಗಳೂರು,ಆ.11- ಮಣ್ಣಿನಿಂದ ಮಾಡಿದ ಬಣ್ಣವಿಲ್ಲದ ಗಣೇಶ ವಿಗ್ರಹವನ್ನು ಮಾತ್ರ ಖರೀದಿಸಿ ಪೂಜೆ ಮಾಡುವಂತೆ ಹಿಂದ್ ಮಜ್ದೂರ್ ಕಿಸಾನ್ ಪಂಚಾಯತ್ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಲ್.ಕಾಳಪ್ಪ , ಬರುವ ತಿಂಗಳು ಗಣೇಶ ಹಬ್ಬ ಇರುವುದರಿಂದ ಸಾರ್ವಜನಿಕರು ಬಣ್ಣ ಹಚ್ಚಿರುವ ಗಣೇಶ ವಿಗ್ರಹಗಳನ್ನು ಕೊಳ್ಳದೆ ಮಣ್ಣಿನಿಂದ ಮಾಡಿದ ಬಣ್ಣವಿಲ್ಲದ ಗಣೇಶ ವಿಗ್ರಹಗಳನ್ನು ಮಾತ್ರ ಖರೀದಿಸಿ ಎಂದು ಸಲಹೆ ನೀಡಿದರು.
ಗಣೇಶ ವಿಗ್ರಹಗಳಿಗೆ ಹಚ್ಚಿರುವ ಬಣ್ಣದಲ್ಲಿ ಸೀಸ, ಪಾದರಸ, ಅರ್ಸೆನಿಕ್ ಮುಂತಾದ ಹಾನಿಕಾರಕ ರಾಸಾಯನಿಕಗಳನ್ನು ಬಳಸಲಾಗಿರುತ್ತದೆ. ಈ ವಿಗ್ರಹದ ವಿಸರ್ಜನೆಯಿಂದ ನೀರು ಕಲುಷಿತವಾಗುವುದಲ್ಲದೆ ಮೀನುಗಳು ಸಾವನ್ನಪ್ಪುತ್ತವೆ. ಇಂಥ ಕಲುಷಿತ ನೀರು ಮನುಷ್ಯನ ದೇಹ ಸೇರಿ ವಿವಿಧ ರೋಗಳಿಗೆ ತುತ್ತಾಗಬೇಕಾಗುತ್ತದೆ.
ಹಾಗಾಗಿ ರಾಸಾಯನಿಕ ಬಳಸಿ ಮಾಡಿದ ಬಣ್ಣದ ಗಣಪನ ವಿಗ್ರಹಗಳನ್ನು ಕೊಳ್ಳದೆ ಎಲ್ಲರೂ ಪರಿಸರ ಸ್ನೇಹಿಯಾದ ಬಣ್ಣವಿಲ್ಲದ ವಿಗ್ರಹಗಳನ್ನು ಮಾತ್ರ ಪೂಜಿಸಬೇಕೆಂದು ತಿಳಿಸಿದ್ದಾರೆ.