ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆದಿವಾಸಿಗಳ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ: ಜಿತೇಂದ್ರ ಚೌಧರಿ ಆಕ್ರೋಶ

 

ಬೆಂಗಳೂರು, ಆ 11- ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆದಿವಾಸಿಗಳ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ. ಬದಲಾಗಿ ಅವರ ಸಂಸ್ಕøತಿ ಆಚಾರವಿಚಾರಗಳ ಮೇಲೆ ಸಾಂಸ್ಕøತಿಕ ದಾಳಿ ನಡೆಯುತ್ತಿದೆ ಎಂದು ತ್ರಿಪುರದ ಮಾಜಿ ಸಚಿವ ಹಾಗೂ ಆದಿವಾಸಿ ಅಧಿಕಾರ್ ರಾಷ್ಟ್ರೀಯ ಮಂಚ್‍ನ ರಾಷ್ಟ್ರೀಯ ಸಂಚಾಲಕ ಜಿತೇಂದ್ರ ಚೌಧರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕರ ಭವನದಲ್ಲಿಂದು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ವತಿಯಿಂದ ವಿಶ್ವ ಆದಿವಾಸಿ ದಿನದ ಅಂಗವಾಗಿ ಆಯೋಜಿಸಿದ್ದ ಆದಿವಾಸಿ ಹಕ್ಕುಗಳ ಜಾರಿ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, 2011ರ ಜನಗಣತಿ ಪ್ರಕಾರ ಭಾರತದಲ್ಲಿ ಸುಮಾರು 12 ಕೋಟಿ ಆದಿವಾಸಿಗಳಿದ್ದಾರೆ. ಒಟ್ಟು ಸಂಖ್ಯೆಯ ಶೇ.9ರಷ್ಟಿದೆ. ಅವರಲ್ಲಿ ಶೇ.95ರಷ್ಟು ಕುಟುಂಬಗಳು ಕೇವಲ 5 ಸಾವಿರ ರೂ.ಗಿಂತ ಕಡಿಮೆ ಮಾಸಿಕ ಆದಾಯದಲ್ಲಿ ಬದುಕುತ್ತಿವೆ ಎಂದು ಹೇಳಿದರ.
ಸ್ವಾತಂತ್ರ ಹೋರಾಟ ಮೊದಲು ಆರಂಭಿಸಿದ್ದೇ ಆದಿವಾಸಿಗಳು. ಸಿಪಾಯಿ ದಂಗೆಗಿಂತಲೂ ಎರಡು ವರ್ಷದ ಮೊದಲು ಆದಿ ವಾಸಿಗಳು ಬ್ರಿಟಿಷ್ ಆಡಳಿತ ವಿರುದ್ಧ ಹೋರಾಟ ನಡೆಸಿದ್ದರು. ಆದರೆ ಇತ್ತೀಚೆಗೆ ಬಿಜೆಪಿ ಮತ್ತು ಆರ್‍ಎಸ್‍ಎಸ್ ಆದಿವಾಸಿಗಳ ನಂಬಿಕೆ, ಆಚಾರವಿಚಾರಗಳ ಮೇಲೆ ದಾಳಿ ಮಾಡಿ ಶಿವ, ಮಹದೇವ ಎಂಬ ದೇವರ ನಂಬಿಕೆಯನ್ನು ಹೇರುವ ಪ್ರಯತ್ನ ನಡೆಸುತ್ತಿದ್ದಾರೆ.

ಅದಿವಾಸಿಗಳು ಪ್ರಕೃತಿಯ ಆರಾಧಕರು. ಅವರ ನಂಬಿಕೆಗಳನ್ನು ಬದಲಿಸುವ ಪ್ರಯತ್ನ ಮಾಡಬಾರದು ಎಂದು ಹೇಳಿದರು.
ದೇಶಾದ್ಯಂತ ಆದಿವಾಸಿಗಳು ಭೂಮಿಯ ಹಕ್ಕಿಗಾಗಿ 47 ಲಕ್ಷ ಅರ್ಜಿಗಳನ್ನು ಹಾಕಿದ್ದಾರೆ. ಇದು ಸರಿಸುಮಾರು ಒಂದು ಕೋಟಿ ಕುಟುಂಬದ ಸದಸ್ಯರನ್ನು ಅವಲಂಬಿಸಿದೆ. ಅದರಲ್ಲಿ 30 ಲಕ್ಷ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 17 ಲಕ್ಷ ಅರ್ಜಿಗಳನ್ನು ಒಪ್ಪಲಾಗಿದೆ. ಆದರೆ ಕ್ರಮ ಕೈಗೊಳ್ಳುವ ಕೆಲಸ ನಡೆಯುತ್ತಿಲ್ಲ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಒಂದೂ ಅರ್ಜಿಯನ್ನು ಸ್ವೀಕರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಡಳಿತ ವ್ಯವಸ್ಥೆಯಲ್ಲಿ ಮೇಲ್ಟಟ್ಟದಲ್ಲಿ ನಿರ್ಧಾರಗಳಾದರೂ ಕೆಳಹಂತದ ಅಧಿಕಾರಿಗಳು ಸೌಲಭ್ಯಗಳನ್ನು ನೀಡಲು ನಿರಾಕರಿಸುತ್ತಿದ್ದಾರೆ. ಜಿಡುಗಟ್ಟಿದ ವ್ಯವಸ್ಥೆಯನ್ನು ಸರಿಪಡಿಸಬೇಕಾದರೆ ರಾಜಕೀಯ ಹಿತಾಸಕ್ತಿ ಬೇಕು ಎಂದು ಹೇಳಿದರು.

ಇತ್ತೀಚೆಗೆ ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಆದಿವಾಸಿಗಳ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅರಣ್ಯ, ಕಂದಾಯ, ಸಮಾಜ ಕಲ್ಯಾಣ ಸಚಿವರ ಸಭೆ ನಡೆಸಿ ಸಮಸ್ಯೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಮುಖಂಡರಾದ ಎಸ್.ವೈ.ಗುರುಶಾಂತ್, ಜಿ.ಎನ್.ನಾಗರಾಜ್, ವೈ.ಆರ್.ರೆಡ್ಡಿ, ಗೋಪಿ, ಶ್ರೀನಿವಾಸ್, ಸಾಹಿತಿ ಡಾ. ಸುಕನ್ಯ ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ