ಮುನ್ನಾರ್:ಆ-10: ಭಾರೀ ಮಳೆ ಹಾಗೂ ಭೂಕುಸಿತ, ಪ್ರವಾಹ ಪರಿಸ್ಥಿತಿಯಿಂದ ತತ್ತರಿಸಿಹೋಗಿರುವ ಕೇರಳದಲ್ಲಿ ವಿದೇಶಿಗರು ಸೇರಿದಂತೆ ಸುಮಾರು 69 ಪ್ರವಾಸಿಗರು ಸಂಕಷ್ಟಕ್ಕೀಡಾಗಿದ್ದಾರೆ.
ಪ್ರಸಿದ್ದ ಪ್ರವಾಸಿ ತಾಣ ಮುನ್ನಾರ್ ರೆಸಾರ್ಟ್ ನ ಮಾರ್ಗಗಳು ಸಂಪೂರ್ಣ ಮುಚ್ಚಿ ಹೋಗಿದ್ದು, ಸಧ್ಯ ಅಲ್ಲಿ 69 ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ರೆಸಾರ್ಟ್ ದ್ವೀಪದಂತಾಗಿದ್ದು, ಅಲ್ಲಿರುವ ಪ್ರವಾಸಿಗರು ಹೊರಜಗತ್ತಿನೊಂದಿಗೆ ಸಂಪರ್ಕ ಕಡಿದುಕೊಂಡಿದ್ದಾರೆ.
ಸೇನೆ ಮತ್ತು ರಕ್ಷಣಾ ಸಿಬ್ಬಂದಿ ರಸ್ತೆಯಲ್ಲಿ ಬಿದ್ದಿರುವ ಮಣ್ಣು ತೆರವು ಮಾಡಿ ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆತರುವ ಕಾರ್ಯಾಚರಣೆ ಆರಂಭಿಸಿದೆ. ಪ್ರವಾಸಿಗರಿಗೆ ಅಗತ್ಯ ವಸ್ತುಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಇಡುಕ್ಕಿ ಜಿಲ್ಲೆಯ ಜಿಲ್ಲಾಧಿಕಾರಿ ಜೀವನ್ ಕುಮಾರ್ ತಿಳಿಸಿದ್ದಾರೆ.
ಈ ನಡುವೆ ಚೆನ್ನೈನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಮಳೆ ಕಡಿಮೆಯಾಗುವವರೆಗೆ ಕೇರಳಕ್ಕೆ ತೆರಳದಂತೆ ತಮ್ಮ ದೇಶದ ಪ್ರವಾಸಿಗರಿಗೆ ಸೂಚನೆ ರವಾನಿಸಿದೆ.
ಕೇರಳದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಇದುವರೆಗೆ 27 ಮಂದಿ ಸಾವನ್ನಪ್ಪಿದ್ದಾರೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ದೂರವಾಣಿ ಕರೆ ಮಾಡಿ ನೆರವಿನ ಭರವಸೆ ನೀಡಿದ್ದಾರೆ.
kerala,heavy rain,Munnar resort