ಮೊದಲ ಟೆಸ್ಟ್ ನಲ್ಲಿ ಆಂಗ್ಲರ ಕಾಡಿದ್ದ ವಿರಾಟ್ ಕೊಹ್ಲಿ ಈಗ ವಿಶ್ವದ ನಂಬರ್ ಟೆಸ್ಟ್ ಬ್ಯಾಟ್ಸಮನ್!

ಲಂಡನ್: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್ ನಲ್ಲಿ ಆಂಗ್ಲರನ್ನು ಕಾಡಿದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಇದೀಗ  ವಿಶ್ವದ ನಂಬರ್ ಟೆಸ್ಟ್ ಬ್ಯಾಟ್ಸಮನ್ ಕೀರ್ತಿ ಪಡೆದಿದ್ದಾರೆ.
ಇಂಗ್ಲೆಂಡ್‌ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದಲ್ಲಿ ಏಕಾಂಗಿ ಹೋರಾಟ ನಡೆಸಿದ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಇದೀಗ ಐಸಿಸಿ ಟೆಸ್ಟ್‌ ಬ್ಯಾಟಿಂಗ್‌ ರ‍್ಯಾಂಕಿಂಗ್‌‌ನಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಅಂತ್ಯವಾಗುತ್ತಿದ್ದಂತೆಯೇ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಐಸಿಸಿ ಟೆಸ್ಟ್ ಬ್ಯಾಟ್ಸಮನ್ ಗಳ ರ‍್ಯಾಂಕಿಂಗ್‌ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪೈಕಿ ಮೊದಲ ಟೆಸ್ಟ್ ನಲ್ಲಿ ಎರಡೂ ಇನ್ನಿಂಗ್ಸ್ ಗಳಿಂದ 200 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಬ್ಯಾಟ್ಸಮನ್ ಗಳ  ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
ಆ ಮೂಲಕ ಕೊಹ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ವೀವನ್‌ ಸ್ಮಿತ್‌ ರನ್ನು ಹಿಂದಿಕ್ಕಿದ್ದಾರೆ. ಏಕದಿನ ಕ್ರಿಕೆಟ್‌ ನಲ್ಲೂ ನಂ1 ಬ್ಯಾಟ್ಸ್‌ಮನ್‌ ಆಗಿರುವ ಕೊಹ್ಲಿ ಡಬಲ್ ಸಾಧನೆ ಮಾಡಿದ್ದು, ವಿಶ್ವಶ್ರೇಷ್ಠ ಬ್ಯಾಟ್ಸಮನ್ ಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ ಏಳನೇ ಭಾರತೀಯ ಬ್ಯಾಟ್ಸಮನ್‌ ಎಂಬ ಕೀರ್ತಿಗೆ ಕೊಹ್ಲಿ ಪಾತ್ರರಾಗಿದ್ದಾರೆ. ಅಲ್ಲದೇ 2011ರಲ್ಲಿ ಸಚಿನ್‌ ತೆಂಡೂಲ್ಕರ್‌ ಈ ಸ್ಥಾನವನ್ನು ಅಲಂಕರಿಸಿದ್ದ ಬಳಿಕ ಇದೇ ಮೊದಲ ಬಾರಿಗೆ ಭಾರತ ತಂಡದ ಬ್ಯಾಟ್ಸಮನ್‌ ಒಬ್ಬರು ಈ ಸಾಧನೆ ಮಾಡಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಸೋತರೂ ಪ್ರಥಮ ಇನಿಂಗ್ಸ್‌ನಲ್ಲಿ 149ರನ್‌ ಹಾಗು ಎರಡನೇ ಇನಿಂಗ್ಸ್‌ನಲ್ಲಿ 51ರನ್‌ಗಳಿಸಿದ ಕೊಹ್ಲಿ ವಿರೋಚಿತ ಆಟವಾಡಿದ್ದರು. ಆ ಮೂಲಕ ಕೊಹ್ಲಿ ತಮ್ಮ ಬ್ಯಾಟಿಂಗ್ ರೇಟಿಂಗ್ ಅಂಕಗಳನ್ನು 934 ಏರಿಕೆ ಮಾಡಿಕೊಂಡು ಅಗ್ರಸ್ಥಾನಕ್ಕೇರಿದ್ದಾರೆ.
ಈ ಹಿಂದೆ ರಾಹುಲ್ ದ್ರಾವಿಡ್‌, ಗೌತಮ್‌ ಗಂಭೀರ್‌, ಸುನಿಲ್‌ ಗಾವಸ್ಕರ್‌ ಹಾಗೂ ದಿಲೀಪ್‌ ವೆಂಗ್ಸರ್ಕರ್‌ ಈ ಗೌರವಕ್ಕೆ ಭಾಜನರಾದ ಭಾರತೀಯ ಬ್ಯಾಟ್ಸಮನ್ ಗಳಾಗಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ