ಬೆಂಗಳೂರು, ಆ.6-ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ ಆರಂಭಿಸಿದೆ. ಇದೇ 13 ರಂದು ಬೀದರ್‍ನಲ್ಲಿ ರೈತರ ಬೃಹತ್ ಸಮಾವೇಶ ನಡೆಸಲು ಸಿದ್ಧ ಮಾಡಿಕೊಂಡಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ಈ ಸಮಾವೇಶಕ್ಕೆ ಆಗಮಿಸಲಿದ್ದಾರೆ.
ಬಿಜೆಪಿ ಪಕ್ಷ ಲೋಕಸಭೆ ಚುನಾವಣೆಗೆ ಈಗಾಗಲೇ ಸಿದ್ಧತೆಗಳನ್ನು ನಡೆಸುತ್ತಿದ್ದು, ಸರಣಿ ಸಭೆ, ಚರ್ಚೆಗಳನ್ನು ಮಾಡುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ತಯಾರಿ ಜೋರಾಗಿಯೇ ಸಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಅಬ್ಬರದ ಪ್ರಚಾರಕ್ಕೆ ಮುಂದಾಗಿದ್ದರೆ ಮುಂಬೈ-ಕರ್ನಾಟಕದ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಸಮಾವೇಶಗಳನ್ನು ನಡೆಸಲು ಶುರುವಿಟ್ಟುಕೊಂಡಿದೆ.
ಅದರ ಭಾಗವಾಗಿ ಇದೇ 13 ರಂದು ರೈತ ಸಮಾವೇಶ ಹಮ್ಮಿಕೊಂಡಿದ್ದು,ಒಂದು ಲಕ್ಷಕ್ಕೂ ಹೆಚ್ಚು ರೈತರನ್ನು ಸೇರಿಸಿ ಶಕ್ತಿ ಪ್ರದರ್ಶನ ನಡೆಸುವ ತಯಾರಿಯಲ್ಲಿ ತೊಡಗಿದ್ದು, ಕಾರ್ಯಕ್ರಮದ ಉದ್ಘಾಟನೆಗೆ ರಾಹುಲ್‍ಗಾಂಧಿಯವರು ಹಾಗೂ ಎಐಸಿಸಿ ಮುಖಂಡರು ಆಗಮಿಸಲಿದ್ದಾರೆ. ಸಭೆಯ ರೂಪುರೇಷೆಗಳ ಬಗ್ಗೆ ಚರ್ಚೆ ನಡೆದಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕದಲ್ಲಿ ನೀಡಿರುವ ಹೇಳಿಕೆ, ಇದರಿಂದ ಕಾಂಗ್ರೆಸ್ ಆಗಿರುವ ಡ್ಯಾಮೇಜ್ ಕಂಟ್ರೋಲ್ ಮಾಡುವ ಸಂಬಂಧ ಉತ್ತರ ಕರ್ನಾಟಕದಲ್ಲಿ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಗಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗಳನ್ನು ಖಂಡಿಸಿ ಆ ಭಾಗದ ರೈತರು, ಮುಖಂಡರು ಕರೆದಿದ್ದ ಬಂದ್ ಯಶಸ್ವಿಯಾಗದಿದ್ದರೂ ಜನರ ಮನಸ್ಸಿನ ಆಕ್ರೋಶ ಇದ್ದೇ ಇದೆ. ಮೈತ್ರಿ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್‍ನ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರಿಂದ ಹೊರಬರಲು ಕಾಂಗ್ರೆಸ್ ಸರ್ಕಸ್ ಮಾಡುತ್ತಿದೆ.
ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಹೆಚ್ಚು ಸ್ಥಾನಗಳನ್ನು ಉತ್ತರ ಕರ್ನಾಟಕ ಭಾಗದವರಿಗೆ ನೀಡುವುದು, ನಿಗಮ ಮಂಡಳಿಗಳ ನೇಮಕಾತಿಯಲ್ಲಿ ಆದ್ಯತೆ ನೀಡುವುದು, ಆ ಭಾಗದಲ್ಲಿ ಹೆಚ್ಚು ಸಮಾವೇಶಗಳನ್ನು ನಡೆಸುವುದು, ಮುಂತಾದ ಯೋಜನೆಗಳನ್ನು ಕಾಂಗ್ರೆಸ್ ರೂಪಿಸಿದೆ.
ಅದರ ಭಾಗವಾಗಿ ಆ.13 ರಂದು ರೈತ ಸಮಾವೇಶವನ್ನು ನಡೆಸಲು ತೀರ್ಮಾನಿಸಿದೆ.
ಬೀದರ್ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಕೈ ತಪ್ಪಿ ಹೋಗಿದೆ. ಧರ್ಮಸಿಂಗ್ ಅವರು ಇರುವವರೆಗೂ ಬೀದರ್ ಅವರ ಹಿಡಿತದಲ್ಲಿತ್ತು. ಈಗ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಈಶ್ವರ್ ಖಂಡ್ರೆ ಅವರು ಬೀದರ್ ಜಿಲ್ಲೆ ಹೊಣೆ ಹೊತ್ತಿದ್ದಾರೆ.
ಪಕ್ಷವನ್ನು ಅಲ್ಲಿ ಸದೃಢಗೊಳಿಸಿ ಈ ಮೂಲಕ ಲೋಕಸಭೆ ಚುನಾವಣೆಗೆ ರಣಕಹಳೆ ಮೊಳಗಿಸಲು ಕಾಂಗ್ರೆಸ್ ಮುಂದಾಗಿದೆ. ಹಳೇ ಮೈಸೂರು ಭಾಗದಲ್ಲಿ ರೈತ ಸಮಾವೇಶ ನಡೆಸಬೇಕೆಂಬ ಮಾತು ಕೇಳಿ ಬಂದಿತ್ತಾದರೂ ಅಲ್ಲಿ ಸಮಾವೇಶ ಪ್ರಾರಂಭಿಸಿದರೆ ಮೈತ್ರಿ ಸರ್ಕಾರಗಳ ನಡುವೆಯೇ ಫೈಟ್ ಶುರುವಾಗುತ್ತದೆ. ಬಿಜೆಪಿ ಪ್ರಬಲವಾಗಿರುವ ಕಡೆ ನಾವು ಹೆಚ್ಚು ಪ್ರಚಾರ, ಸಮಾವೇಶಗಳನ್ನು ನಡೆಸಿ ಪಕ್ಷವನ್ನು ಸಂಘಟಿಸಿ ಹೆಚ್ಚು ಸ್ಥಾನಗಳನ್ನು ಗಳಿಸಬೇಕು. ಈ ಹಿನ್ನೆಲೆಯಲ್ಲಿ ಸಮಾವೇಶ, ಸಭೆ, ಸಮಾರಂಭಗಳನ್ನು ನಡೆಸಬೇಕೆಂದು ತೀರ್ಮಾನಿಸಲಾಗಿದೆ.