ಶ್ರಾವಣದ ಮೊದಲ ಸೋಮವಾರ ಸಂಪುಟ ವಿಸ್ತರಣೆ ಸಾಧ್ಯತೆ

ಬೆಂಗಳೂರು, ಆ.6-ಅಂತೂ ಇಂತೂ ಸಂಪುಟ ವಿಸ್ತರಣೆಗೆ ಕಾಲ ಕೂಡಿ ಬಂದಂತಿದೆ. ಆಷಾಢ ಮುಗಿದ ಕೂಡಲೇ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಶ್ರಾವಣದ ಮೊದಲ ಸೋಮವಾರವೇ ಸಂಪುಟ ವಿಸ್ತರಣೆ ಮಾಡಲು ಮೈತ್ರಿ ಸರ್ಕಾರದ ನಾಯಕರು ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್‍ನ 5 ಮಂದಿ, ಜೆಡಿಎಸ್‍ನಿಂದ ಒಬ್ಬರು ಸೇರಿದಂತೆ ಆರು ಜನರನ್ನು ಹೊಸದಾಗಿ ಸಂಪುಟಕ್ಕೆ ಸೇರಿಸಿಕೊಳ್ಳಲು ತೀರ್ಮಾನಿಸಲಾಗಿದೆ.
ಸಂಪುಟ ವಿಸ್ತರಣೆಗೆ ನಗರ ಸ್ಥಳೀಯ ಸಂಸ್ಥೆಗಳ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ ಎಂಬ ಹಿನ್ನೆಲೆಯಲ್ಲಿ ಆಷಾಢ ಮುಗಿದ ಕೂಡಲೇ ಸಂಪುಟ ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

ಮೈತ್ರಿ ಒಪ್ಪಂದದ ಪ್ರಕಾರ ಕಾಂಗ್ರೆಸ್‍ಗೆ ಸಂಪುಟದಲ್ಲಿ ಇನ್ನೂ ಆರು ಸ್ಥಾನಗಳು ಸಿಗಬೇಕು. ಐವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದಂತಿದೆ. ಉತ್ತರ ಕರ್ನಾಟಕ ಭಾಗದ ಮೂವರು, ಉಳಿದ ಇಬ್ಬರಿಗೆ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ.
ಬಜೆಟ್‍ನಲ್ಲಿ ಉತ್ತರ ಕರ್ನಾಟಕ ಭಾಗದವರಿಗೆ ಅನ್ಯಾಯವಾಗಿದೆ ಎಂಬ ಕೂಗು ಕೇಳಿ ಬಂದಿತ್ತು. ಇತ್ತೀಚೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಕೂಡ ಉತ್ತರ ಕರ್ನಾಟಕ ಭಾಗದವರ ಆಕ್ರೋಶಕ್ಕೆ ಕಾರಣವಾಗಿ ಪ್ರತ್ಯೇಕತೆಯ ದನಿ ಎದ್ದಿತ್ತು.
ಮೈತ್ರಿ ಪಕ್ಷದ ಭಾಗವಾಗಿರುವ ಕಾಂಗ್ರೆಸ್‍ಗೆ ಇದು ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ಹಾಗಾಗಿ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಆ ಭಾಗದ ಶಾಸಕರನ್ನೇ ಪರಿಗಣಿಸಲು ಕಾಂಗ್ರೆಸ್ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ಇದೇ 13 ರಂದು ರೈತ ಸಮಾವೇಶಕ್ಕೆಂದು ರಾಹುಲ್‍ಗಾಂಧಿ ಬೀದರ್‍ಗೆ ಆಗಮಿಸುವ ಸಾಧ್ಯತೆ ಇದೆ. ರಾಹುಲ್ ಸಮಾವೇಶ ಮುಂದೂಡಿಕೆಯಾದರೆ 13 ರಂದೇ ಸಂಪುಟ ವಿಸ್ತರಣೆಯಾಗಿ ಆರು ಜನ ನೂತನವಾಗಿ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ. ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್. ರಾಮಲಿಂಗಾರೆಡ್ಡಿ, ಸಂಸದ ಕೆ.ಎಚ್.ಮುನಿಯಪ್ಪ ಪುತ್ರಿ ರೂಪಾಶಶಿಧರ್, ಬಿ.ಸಿ.ಪಾಟೀಲ್, ಸಿ.ಎಸ್.ಶಿವಳ್ಳಿ, ಅಜಯ್‍ಸಿಂಗ್, ಶಿವರಾಮ್ ಹೆಬ್ಬಾರ್, ಬಿ.ಕೆ.ಸಂಗಮೇಶ್, ಟಿ.ಡಿ.ರಾಜೇಗೌಡ ಸೇರಿದಂತೆ ಹಲವರು ಆಕಾಂಕ್ಷಿಗಳಿದ್ದಾರೆ.

ಸಮನ್ವಯ ಸಮಿತಿ ಅಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಷಾಢದ ನಂತರ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಈಗಾಗಲೇ ತಿಳಿಸಿದ್ದಾರೆ.

ಅಲ್ಲದೆ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ ಅವರು ಆಷಾಢದ ನಂತರ ಸಚಿವಾಕಾಂಕ್ಷಿಗಳಿಗೆ ಸಿಹಿ ಸುದ್ದಿ ದೊರೆಯಲಿದೆ ಎಂದು ಹೇಳಿದ್ದರು. ಈ ಎಲ್ಲಾ ಹೇಳಿಕೆಗಳನ್ನು ಗಮನಿಸಿದರೆ ಸದ್ಯದಲ್ಲಿಯೇ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಹೆಚ್ಚಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ