ಫಿಲ್ಮ್ ಸಿಟಿ ಸ್ಥಳಾಂತರ ವಿಚಾರ: ಸಿಎಂ ಗೆ ಮಾಜಿ ಸಿಎಂ ಪತ್ರ

ಬೆಂಗಳೂರು, ಆ.6-ಮೈಸೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಚಿತ್ರನಗರಿ (ಫಿಲ್ಮ್ ಸಿಟಿ)ಯನ್ನು ಅಲ್ಲಿಂದ ರಾಮನಗರಕ್ಕೆ ಸ್ಥಳಾಂತರ ಮಾಡುವ ನಿರ್ಧಾರವನ್ನು ಮರು ಪರಿಶೀಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಪತ್ರ ಬರೆದಿದ್ದಾರೆ.
ಮೈಸೂರು ನಗರದಲ್ಲಿ ಚಿತ್ರನಗರಿ ಸ್ಥಾಪನೆಯಾಗಬೇಕು ಎಂದು ಕನ್ನಡದ ಮೇರು ನಟ, ದಿ.ಡಾ.ರಾಜ್ ಕುಮಾರ್ ಅವರು ಕನಸು ಕಂಡಿದ್ದರು. ಇದನ್ನು ಮನಗಂಡು ಹಿಂದಿನ ಕಾಂಗ್ರೆಸ್ ಸರ್ಕಾರ ಮೈಸೂರಿನಲ್ಲಿ ಚಿತ್ರನಗರಿಯನ್ನು ಮೈಸೂರಿನಲ್ಲಿ ಸ್ಥಾಪಿಸುವ ನಿರ್ಣಯವನ್ನು ಕೈಗೊಂಡು ನೂರು ಎಕರೆ ಜಮೀನನ್ನು ಮಂಜೂರು ಮಾಡಿತ್ತು. ಮಾತ್ರವಲ್ಲ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಾಗಿತ್ತು. ಆದರೆ ಚಿತ್ರನಗರಿಯನ್ನು ರಾಮನಗರಕ್ಕೆ ಸ್ಥಳಾಂತರ ಮಾಡುವುದಾಗಿ ತಾವು ಬಜೆಟ್‍ನಲ್ಲಿ ಘೋಷಣೆ ಮಾಡಿದ್ದೀರಿ, ಈ ನಿರ್ಧಾರವನ್ನು ಮರು ಪರಿಶೀಲಿಸಬೇಕು ಹಾಗೂ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆಯಾಗಬೇಕು ಎಂಬುದು ಕನ್ನಡ ಚಿತ್ರರಂಗದ ಬಹುವರ್ಷಗಳ ಕನಸು ಮತ್ತು ಬೇಡಿಕೆಯಾಗಿದೆ. ಮೈಸೂರು ವಿಶ್ವವಿಖ್ಯಾತ ಪ್ರವಾಸಿ ತಾಣ, ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು ಸೇರಿದಂತೆ ಹಲವಾರು ಭಾಷೆಗಳ ಚಿತ್ರ ನಿರ್ಮಾಪಕರು ಚಿತ್ರೀಕರಣಕ್ಕಾಗಿ ಬಹುವಾಗಿ ಇಷ್ಟಪಡುವ ನಗರ ಮೈಸೂರು. ಮೈಸೂರು ಹಾಗೂ ಸುತ್ತಮುತ್ತಲಿನ ಪ್ರಕೃತಿಯ ಸೊಬಗು ಹಾಗೂ ಪಾರಂಪರಿಕ ಕಟ್ಟಡಗಳು ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂತೆ ಇದೆ. ಹೀಗಾಗಿ ಮೈಸೂರು ಮತ್ತು ಸುತ್ತಮುತ್ತ ನಿತ್ಯವೂ ಒಂದಿಲ್ಲೊಂದು ಚಿತ್ರದ ಚಿತ್ರೀಕರಣ ನಡೆಯುತ್ತಲೇ ಇರುತ್ತದೆ ಎಂದು ಸಮನ್ವಯ ಸಮಿತಿಯ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಪತ್ರದಲ್ಲಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ