ಹೊಸದಿಲ್ಲಿ : ‘ಅಸ್ಸಾಂ ಸರಕಾರ ಕಳೆದ ವಾರ ಬಿಡುಗಡೆಗೊಳಿಸಿರುವ ರಾಷ್ಟ್ರೀಯ ಪೌರರ ರಿಜಿಸ್ಟ್ರಿಯಲ್ಲಿ ಹೆಸರು ಇಲ್ಲದವರ ವಿರುದ್ಧ ಸರಕಾರ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ’ ಎಂದು ಎನ್ಆರ್ಸಿ ಕಾರ್ಯಕ್ರಮ ಸಂಚಾಲಕ ಪ್ರತೀಕ್ ಹಜೇಲಾ ಹೇಳಿದ್ದಾರೆ.
ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಿದ್ದ ಹಜೇಲಾ ಅವರು, “ಎನ್ಆರ್ಸಿಯಲ್ಲಿ ಹೆಸರು ಇಲ್ಲದವರನ್ನು ಸರಕಾರ ಜೈಲಿಗೂ ಹಾಕುವುದಿಲ್ಲ; ಗಡೀಪಾರೂ ಮಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಎಆರ್ಸಿ ಅಂತಿಮ ಕರಡು ಹೊರಬಿದ್ದಿರುವ ಹೊರತಾಗಿಯೂ ಅದರಲ್ಲಿ ಹೆಸರಿಲ್ಲದವರಿಗೆ ವಿದೇಶಿಗರ ನ್ಯಾಯಮಂಡಳಿಗೆ ಅಪೀಲು ಸಲ್ಲಿಸುವ ಅವಕಾಶ ಇರುತ್ತದೆ; ಎನ್ಆರ್ಸಿ ಪ್ರಕ್ರಿಯೆ ಫಲಿತಾಂಶದ ಬಗ್ಗೆ ಅತೃಪ್ತಿ, ಅಸಮಾಧಾನ ಇರುವವರು ನ್ಯಾಯ ಮಂಡಳಿಯಲ್ಲಿ ತಮ್ಮ ಅಹವಾಲನ್ನು ತೋಡಿಕೊಳ್ಳಬಹುದು” ಎಂದು ಪ್ರತೀಕ್ ಹಜೇಲಾ ಹೇಳಿದರು.
ಎನ್ಆರ್ಸಿ ಸಿದ್ಧಪಡಿಸುವ ಪ್ರಕ್ರಿಯೆಯು ಬಹಳ ದೀರ್ಘ ಮತ್ತು ಸಂಕೀರ್ಣವಾದದ್ದು. 3 ಕೋಟಿಗೂ ಹೆಚ್ಚು ಜನರು ಸೇರ್ಪಡೆಗೆ ಅರ್ಜಿ ಹಾಕಿದ್ದರು; 6 ಕೋಟಿಗೂ ಅಧಿಕ ದಾಖಲೆ ಪತ್ರಗಳ ಅವಲೋಕನೆ ನಡೆದಿದೆ. ಇಷ್ಟು ಸುದೀರ್ಘ ಮತ್ತು ಸಂಕೀರ್ಣ ಪ್ರಕ್ರಿಯೆಯು ಮೊದಲ ಯತ್ನದಲ್ಲೇ ಅಂತಿಮವಾಗಲು ಸಾಧ್ಯವಿಲ್ಲ ಎಂಬುದನ್ನು ಕಾನೂನು ಅರಿತುಕೊಂಡಿದೆ ಎಂದು ಪ್ರತೀಕ್ ಹೇಳಿದರು.
ಅಸ್ಸಾಂ ಎನ್ಆರ್ಸಿ ಯಿಂದ ಪ್ರಕೃತ 40 ಲಕ್ಷ ಜನರು ಹೊರಗಿದ್ದು ಅವರಲ್ಲಿ ಹೆಚ್ಚಿನವರು ಮುಸ್ಲಿಮರು ಎಂಬುದು ಗಮನಾರ್ಹವಾಗಿದೆ. ಅಂತೆಯೇ ಈ ವಿಷಯದಲ್ಲಿ ತುಷ್ಟೀಕರಣ ರಾಜಕೀಯ ನಡೆಯುತ್ತಿದೆ ಎಂದು ಆರೋಪಿಸಲಾಗುತ್ತಿದೆ.