ಅಸ್ಸಾಂ ಎನ್ ಆರ್ ಸಿ ಅಂತಿಮ ಕರಡು: ಭಾರತೀಯ ಪ್ರಜೆಗಳಿಗೆ ಮಾತ್ರ ಓಟು: ಸಿಇಸಿ

ಗುವಾಹಟಿ : ಅಸ್ಸಾಂ ರಾಷ್ಟ್ರೀಯ ಪೌರರ ರಿಜಿಸ್ಟ್ರಿ (ಎನ್‌ಆರ್‌ಸಿ) ಕುರಿತ ರಾಜಕೀಯ ಪ್ರಕ್ಷುಬ್ಧತೆ ಇನ್ನೂ ಬಲವಾಗಿರುವ ನಡುವೆಯೇ ಚುನಾವಣಾ ಆಯೋಗ “ಮತದಾರರ ಪಟ್ಟಿಯಲ್ಲಿ ಇಲ್ಲದವರು ಮತ ಹಾಕಲು ಅನರ್ಹರು” ಎಂದು ಹೇಳಿರುವುದು ಉರಿವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಅಸ್ಸಾಂ ಎನ್‌ಆರ್‌ಸಿ ಅಂತಿಮ ಕರಡಿನಲ್ಲಿ 40 ಲಕ್ಷ ಜನರ ಹೆಸರನ್ನು ಕೈಬಿಡಲಾಗಿದೆ. ಇದರ ಅರ್ಥ ಅವರು ದೇಶದ ನೈಜ ಪ್ರಜೆಗಳಲ್ಲ ಎಂದೇ ತಿಳಿಯಲಾಗಿದೆ.  ರಾಜ್ಯದಲ್ಲಿನ ಅಕ್ರಮ ವಲಸಿಗರನ್ನು ಗುರುತಿಸುವ ಕ್ರಮವಾಗಿ ಎನ್‌ಆರ್‌ಸಿ ಸಿದ್ದಪಡಿಸಲಾಗಿದ್ದು ನಿನ್ನೆಯಷ್ಟೇ ಅಸ್ಸಾಂ ಸರಕಾರ ಇದರ ಅಂತಿಮ ಕರಡನ್ನು ಪ್ರಕಟಿಸಿತ್ತು.

“ಎನ್‌ಆರ್‌ಸಿ ಅಂತಿಮ ಕರಡು ದಾಖಲೆಗೆ ಅನುಗುಣವಾದ ಮತದಾರರ ಪಟ್ಟಿಯಲ್ಲಿ  ಯಾರ ಹೆಸರಿಲ್ಲವೋ ಅವರು ಮತ ಹಾಕಲು ಅನರ್ಹರು. ನೈಜ ಪ್ರಜೆಗಳಿಗೆ ಮಾತ್ರವೇ ಮತದಾನದ ಹಕ್ಕು ಇರುತ್ತದೆ” ಎಂದು ಮುಖ್ಯ ಚುನಾವಣಾ ಆಯುಕ್ತರಾಗಿರುವ ಒ ಪಿ ರಾವತ್‌ ಅವರು ‘ಎನ್‌ಆರ್‌ಸಿ ಅಂತಿಮ ಕರಡಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಅಧಿಕೃತ ಹೇಳಿಕೆ’ ನೀಡಿದ್ದಾರೆ.

ಮತದಾರರ ಪಟ್ಟಿಯನ್ನು ಮುಂದಿನ ವರ್ಷ ಪರಿಷ್ಕರಿಸುವಾಗ ಎನ್‌ಆರ್‌ಸಿ ಅಂತಿಮ ಕರಡಿಗೆ ಅನುಗುಣವಾಗಿ ಎಲ್ಲ ಅರ್ಹ ಮತದಾರರನ್ನು ಸೇರಿಸಬೇಕು ಎಂದು ಚುನಾವಣಾ ಆಯೋಗ ಹೇಳಿದೆ.  

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ