ಮತ್ತೆ ಹೊಸ ದಾಖಲೆ, ಸೆನ್ಸೆಕ್ಸ್ 200 ಅಂಕ ಹೆಚ್ಚಳ, 11,400 ದಾಟಿದ ನಿಫ್ಟಿ

ಮುಂಬೈ : ಏಷ್ಯಾದ ಷೇರು ಮಾರುಕಟ್ಟೆಗಳಲ್ಲಿ ಸ್ಥಿರತೆಯ ಪ್ರವೃತ್ತಿ ತೋರಿಬಂದಿರುವುದನ್ನು ಅನುಸರಿಸಿ ಮುಂಬೈ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ, ಕಳೆದ ಶುಕ್ರವಾರದ ರಾಲಿಯನ್ನು ಇಂದು ಸೋಮವಾರವೂ ಮುಂದುವರಿಸಿ, ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 200ಕ್ಕೂ ಅಧಿಕ ಅಂಕಗಳ ಜಿಗಿತದೊಂದಿಗೆ 37,790.72 ಅಂಕಗಳ ಮಟ್ಟಕ್ಕೇರುವ ಮೂಲಕ ಹೊಸ ದಾಖಲೆಯ ಎತ್ತರವನ್ನು ತಲುಪಿದ ಸಾಧನೆ ಮಾಡಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 11,400 ಅಂಕಗಳನ್ನು ದಾಟಿ ಮುನ್ನುಗ್ಗಿರುವುದು ಗಮನಾರ್ಹವೆನಿಸಿತು.
ಗ್ರಾಹಕ ಉತ್ಪನ್ನಗಳ ಕಂಪೆನಿ, ಪಿಎಸ್‌ಯು, ಬ್ಯಾಂಕಿಂಗ್‌ ಮೊದಲಾದ ರಂಗಗಳ ಶೇರುಗಳು ಇಂದು ಭರ್ಜರಿ ಖರೀದಿಯನ್ನು ಕಂಡ ಪ್ರಯುಕ್ತ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಬೆಳಗ್ಗೆ 10.30ರ ಹೊತ್ತಿಗೆ 136.55 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 37,692.71 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 30.90 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 11,391.70 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಎಕ್ಸಿಸ್‌ ಬ್ಯಾಂಕ್‌, ಎಸ್‌ಬಿಐ, ಐಸಿಐಸಿಐ ಬ್ಯಾಂಕ್‌, ಎಚ್‌ ಡಿ ಎಫ್ ಸಿ, ಇನ್‌ಫೋಸಿಸ್‌ ಶೇರುಗಳು ಇಂದು ಅತೀ ಹೆಚ್ಚು ಕ್ರಿಯಾಶೀಲವಾಗಿದ್ದವು. ಟಾಪ್‌ ಗೇನರ್‌ಗಳು : ಐಸಿಐಸಿಐ ಬ್ಯಾಂಕ್‌, ಯುಪಿಎಲ್‌, ಎಸ್‌ಬಿಐ, ಟೆಕ್‌ ಮಹೀಂದ್ರ, ಟಾಟಾ ಸ್ಟೀಲ್‌; ಟಾಪ್‌ ಲೂಸರ್‌ಗಳು : ಎಚ್‌ಯುಎಲ್‌, ಸನ್‌ ಫಾರ್ಮಾ, ಲೂಪಿನ್‌, ಡಾ. ರೆಡ್ಡೀಸ್‌ ಲ್ಯಾಬ್‌, ಕೋಟಕ್‌ ಮಹಿಂದ್ರ.
ಡಾಲರ್‌ ಎದುರಿನ ತನ್ನ ಏರು ಗತಿಯನ್ನು ನಿರಂತರ ಎರಡನೇ ದಿನಕ್ಕೆ ವಿಸ್ತರಿಸಿರುವ ರೂಪಾಯಿ ಇಂದು 6 ಪೈಸೆಯ ಸುಧಾರಣೆಯನ್ನು ದಾಖಲಿಸಿ ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 68.54 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ