ಬೆಂಗಳೂರು, ಆ.2- ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಏಕೆ ಅಭ್ಯರ್ಥಿಯಾಗಬಾರದು ಎಂದು ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್ ಇಂದಿಲ್ಲಿ ಪ್ರಶ್ನಿಸಿದರು.
ಜೆಡಿಎಸ್ ಕೇಂದ್ರ ಕಚೇರಿ ಜೆ.ಪಿ.ಭವನದಲ್ಲಿ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಅವರು ಈಗಾಗಲೇ ಪಕ್ಷದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಮೈಸೂರು ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯಾದರೆ ತಪ್ಪೇನಿಲ್ಲ ಎಂದರು.
ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಯಾರನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದರೂ ಅವರ ಪರವಾಗಿ ಕೆಲಸ ಮಾಡುತ್ತೇವೆ. ವರಿಷ್ಠರು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧವಾಗಿರುವುದಾಗಿ ಹೇಳಿದರು.
ಸಂತೋಷ ತಂದಿದೆ:
ಕೊಡಗು ಜಿಲ್ಲಾ ಉಸ್ತುವಾರಿ ನೀಡಿರುವುದು ತಮಗೆ ಸಂತೋಷ ತಂದಿದೆ. ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ. ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕೆಂಬ ಪ್ರಸ್ತಾಪವನ್ನು ನಾನೇ ಮಾಡಿದ್ದೇ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವರ ನೇಮಕದಲ್ಲಿ ಯಾವುದೇ ಅಸಮಾಧನ ಇಲ್ಲ ಎಂದು ಹೇಳಿದರು.
ನಾಳೆ ಮಡಿಕೇರಿಯಲ್ಲಿ ಜಿಲ್ಲಾ ಉಸ್ತುವಾರಿ ಕಚೇರಿ ಆರಂಭಿಸಲಾಗುವುದು ಎಂದು ಹೇಳಿದರು.
ವಿಶ್ವವಿಖ್ಯಾತ ಹಂಪಿ ಪ್ರವಾಸಿ ತಾಣವು ವಿಶ್ವಪಾರಂಪರಿಕ ಸ್ಥಳಗಳ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿದೆ. ನೂರು ವಿಶ್ವದ ಪಾರಂಪರಿಕ ಸ್ಥಗಳಲ್ಲಿ 9ನೇ ಸ್ಥಾನ ದೊರೆತಿದ್ದು ವೆಬ್‍ಸೈಟ್‍ನಲ್ಲಿರುವ ಲೋಪ ಸರಿಪಡಿಸಲು ಪ್ರಸ್ತಾಪಿಸಲಾಗುವುದು ಎಂದರು.
ರಾಜಕೀಯ ಪೇರಿತ ಹೇಳಕೆ ಬೇಡ:
ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಪೇರಿತ ಹೇಳಿಕೆ ನೀಡಿರುವುದನ್ನು ಬಿಟ್ಟು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಅಭಿವೃದ್ಧಿಗೆ ಆದ್ಯತೆ ನೀಡುವುದು ಸೂಕ್ತ. ಸಮಗ್ರ ಕರ್ನಾಟಕದ ಅಭಿವೃದ್ಧಿಯಾಗಬೇಕೆಂಬುದು ಮುಖ್ಯಮಂತ್ರಿಗಳ ಉದ್ದೇಶ. ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನ ಪ್ರಾರಂಭ ಮಾಡಲಾಯಿತು. ಕೆಲವು ಇಲಾಖೆಗಳನ್ನು ಬೆಳಗಾವಿ ಸ್ಥಳಾಂತರ ಮಾಡಲು ಉದ್ದೇಶಿಸಲಾಗಿದೆ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂಬ ಬೇಡಿಕೆ ಸರಿಯಲ್ಲ. ಅಖಂಡ ಕರ್ನಾಟಕದ ಏಕೀಕರಣಕ್ಕಾಗಿ ನಮ್ಮ ಹಿರಿಯರು ನಡೆಸಿರುವ ಹೋರಾಟ, ತ್ಯಾಗ ಅವುಗಳನ್ನು ಬಲ್ಲವರು ಯಾರೂ ಕೂಡ ಪ್ರತ್ಯೇಕತೆಯ ಯೋಚನೆ ಮಾಡುವುದಿಲ್ಲ. ಒಂದು ವೇಳೆ ಅಂತಹ ಯೋಚನೆ ಮಾಡುವವರು ರಾಜ ದ್ರೋಹಿಗಳು ಎಂದು ಹೇಳಿದರು.
ರಾಜ್ಯದ 20 ಪ್ರವಾಸಿಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಗುರಿತಿಸಲಾಗಿದ್ದು, ಬೇಲೂರು, ಶ್ರವಣಬೆಳಗೊಳ, ಐಹೊಳೆ, ಹಳೇಬೀಡು, ಮೈಸೂರು ಸೇರಿದಂತೆ 6 ಪ್ರಮುಖ ಪ್ರವಾಸಿ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
ಪ್ರವಾಸಿ ಸ್ಥಳಗಳಿಗೆ ರಸ್ತೆ ಸಂಪರ್ಕ, ಮೂಲ ಸೌಕರ್ಯದ ಕೊರತೆಗಳಿವೆ. ಅವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ರಾಜ್ಯದ ಪ್ರವಾಸಿ ಕೇಂದ್ರಗಳ ಪರಿಚಯಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಸಾರ್ವಜನಿಕರಿಂದ ಸ್ವೀಕರಿಸುವ ಅಹವಾಲುಗಳಿಗೆ ತಕ್ಷಣವೇ ಪರಿಹಾರ ಸಿಗದಿದ್ದರೆ ಮುಂದೆ ಕೈಗೊಳ್ಳುವ ಕ್ರಮಗಳ ಬಗ್ಗೆ ಕೂಡಲ ಮಾಹಿತಿ ನೀಡಲಾಗುವುದು ಎಂದು ಹೇಳಿದರು.