ರಾಜ್ಯದ ಇಬ್ಬರು ಐಎಎಸ್ ಅಧಿಕಾರಿಗಳಿಗೆ ರಾಷ್ಟ್ರಮಟ್ಟದಲ್ಲಿ ಉನ್ನತ ಸ್ಥಾನ

 

ಬೆಂಗಳೂರು/ನವದೆಹಲಿ, ಆ.2- ರಾಜ್ಯದ ಉನ್ನತಾಧಿಕಾರಿಗಳ ಉತ್ತಮ ಸೇವೆಗೆ ಮನ್ನಣೆ ನೀಡಿರುವ ಕೇಂದ್ರ ಸರ್ಕಾರ, ಕರ್ನಾಟಕದ ಇಬ್ಬರು ಐಎಎಸ್ ಅಧಿಕಾರಿಗಳಿಗೆ ರಾಷ್ಟ್ರಮಟ್ಟದಲ್ಲಿ ಉನ್ನತ ಸ್ಥಾನ ನೀಡಿದೆ.
2001ರ ಬ್ಯಾಚ್‍ನ ಸಮರ್ಥ ಐಎಎಸ್ ಅಧಿಕಾರಿಗಳಾದ ದರ್ಪಣ್ ಜೈನ್ ಮತ್ತು ಏಕ್‍ರೂಪ್ ಕೌರ್ ಅವರಿಗೆ ಕೇಂದ್ರದಲ್ಲಿ ಜಂಟಿ ಕಾರ್ಯದರ್ಶಿ ಮತ್ತು ಅದಕ್ಕೆ ಸಮನಾದ ಹುದ್ದೆಗಳನ್ನು ನೀಡಲಾಗಿದೆ.
ಪ್ರಸ್ತುತ ಕೈಗಾರಿಕಾ ಅಭಿವೃದ್ಧಿ ಆಯುಕ್ತರು ಹಾಗೂ ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆ ನಿರ್ದೇಶಕರೂ ಆಗಿ ದರ್ಪಣ್ ಜೈನ್ ಸೇವೆ ಸಲ್ಲಿಸುತ್ತಿದ್ದಾರೆ ಹಾಗೂ ಏಕ್‍ರೂಪ್ ಕೌರ್ ವಾಣಿಜ್ಯ ಕಾರ್ಯದರ್ಶಿ(ಆಯವ್ಯಯ) ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಜೈನ್ ಮತ್ತು ಕೌರ್ ಸೇರಿದಂತೆ ಭಾರತದಾದ್ಯಂತ 27 ಹಿರಿಯ ಐಎಎಸ್ ಅಧಿಕಾರಿಗಳು ಕೇಂದ್ರದ ಸೇವೆಗೆ ಆಯ್ಕೆ ಮಾಡಲಾಗಿದೆ. ಇವರ ಹುದ್ದೆಯು ರಕ್ಷಣಾ ಸಚಿವಾಲಯದ ಮೇಜರ್ ಜನರಲ್ ಶ್ರೇಣಿಗೆ ಸರಿಸಮಾನವಾಗಲಿದೆ.
ಮಹಾರಾಷ್ಟ್ರ ಕೇಡರ್‍ನ ಕರ್ನಾಟಕ ಮೂಲದ ಹಿರಿಯ ಐಎಎಸ್ ಅಧಿಕಾರಿ ವಿಜಯಲಕ್ಷ್ಮೀ ಎಸ್. ಬಿದರಿ (ನಿವೃತ್ತ ಐಪಿಎಸ್ ಅಧಿಕಾರಿ ಶಂಕರ ಬಿದರಿ ಪುತ್ರಿ)ಅವರನ್ನೂ ಸಹ ಉನ್ನತ ಹುದ್ದೆಗೆ ಕೇಂದ್ರ ಆಯ್ಕೆ ಮಾಡಿದೆ. ಬೆಂಗಳೂರಿನ ಸಿಬ್ಬಂದಿ ಆಯ್ಕೆ ಆಯೋಗದ ಪ್ರಾದೇಶಿಕ ನಿರ್ದೇಶಕರಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.
ಜೈನ್, ಕೌರ್ ಸೇರಿದಂತೆ ಆಯ್ಕೆಯಾಗಿರುವ 27 ಹಿರಿಯ ಐಎಎಸ್ ಅಧಿಕಾರಿಗಳು ಭಾರತ ಸರ್ಕಾರದ ಅಡಿ ಮೂರನೆ ಉನ್ನತ ಕಾರ್ಯನಿರ್ವಹಣೆ ಶ್ರೇಣಿ ಹುದ್ದೆ ಹೊಂದಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ