ತಮಿಳುನಾಡಿಗೆ ಹರಿದ 100 ಟಿಎಂಸಿ ಹೆಚ್ಚುವರಿ ನೀರು

 

ಬೆಂಗಳೂರು, ಆ.2- ಕಾವೇರಿ ಜಲಾನಯನ ಭಾಗದಿಂದ ತಮಿಳುನಾಡಿಗೆ ಹೆಚ್ಚೂಕಡಿಮೆ 100 ಟಿಎಂಸಿ ಅಡಿಯಷ್ಟು ಹೆಚ್ಚುವರಿಯಾಗಿ ರಾಜ್ಯದಿಂದ ಹರಿದು ಹೋಗಿದೆ.
ಕಾವೇರಿ ನ್ಯಾಯಾಧೀಕರಣದ ತೀರ್ಪಿನ ಪ್ರಕಾರ ಜೂನ್, ಜುಲೈ ತಿಂಗಳಲ್ಲಿನಲ್ಲಿ 40.5 ಟಿಎಂಸಿ ಅಡಿ ನೀರನ್ನು ರಾಜ್ಯದಿಂದ ತಮಿಳುನಾಡಿಗೆ ಬಿಡಬೇಕಾಗಿತ್ತು. ಆದರೆ, ಮೂರುಪಟ್ಟು ನೀರು ಈಗಾಗಲೇ ಹರಿದು ಹೋಗಿದೆ.
ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಕಾವೇರಿ ಜಲಾನಯನ ಭಾಗದಲ್ಲಿ ಭಾರೀ ಮಳೆಯಾದ ಪರಿಣಾಮ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ತಮಿಳುನಾಡಿನ ಮೆಟ್ಟೂರು ಜಲಾಶಯವೂ ಕೂಡ ಜುಲೈ ತಿಂಗಳಿನಲ್ಲೇ ಭರ್ತಿಯಾಗಿದೆ. ಜುಲೈ ಅಂತ್ಯದವರೆಗೆ ರಾಜ್ಯದಿಂದ ತಮಿಳುನಾಡಿಗೆ 133 ಟಿಎಂಸಿ ನೀರನ್ನು ಬಿಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಅಕ್ಟೋಬರ್ ಅಂತ್ಯದವರೆಗೆ ರಾಜ್ಯದಿಂದ ಒಟ್ಟು 143ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಬೇಕಾಗಿದೆ. ಇದೇ ತಿಂಗಳಲ್ಲಿ ಅಷ್ಟೂ ಪ್ರಮಾಣದ ನೀರು ಹರಿದು ಹೋಗಲಿದೆ.
ಈಗಾಗಲೇ ಸೆಪ್ಟೆಂಬರ್ ಅಂತ್ಯದವರೆಗೂ ಬಿಡಬೇಕಾಗಿರುವುದಕಿಂತ ಹೆಚ್ಚಿನ ಪ್ರಮಾಣದ ನೀರು ಹರಿದು ಹೋಗಿದೆ. ಜೂನ್ ತಿಂಗಳಿನಲ್ಲಿ 9.5 ಟಿಎಂಸಿ, ಜುಲೈ ತಿಂಗಳಲ್ಲಿ 31 ಟಿಎಂಸಿ ಅಡಿ ನೀರನ್ನು ಬಿಡಬೇಕಾಗಿತ್ತು. ಕಳೆದೆರಡು ತಿಂಗಳಿನಲ್ಲಿ ಕೊಡಗು, ಮಲೆನಾಡು ಭಾಗದಲ್ಲಿ ನಿರಂತರವಾಗಿ ಬಿದ್ದ ಭಾರೀ ಮಳೆಯಿಂದ ಕಬಿನಿ, ಕೆಆರ್‍ಎಸ್, ಹಾರಂಗಿ, ಹೇಮಾವತಿ ಜಲಾಶಯಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿವೆ.
ಹೆಚ್ಚುವರಿ ನೀರನ್ನು ಸಂಗ್ರಹಿಸಲಾಗದೆ ಅನಿವಾರ್ಯವಾಗಿ ತಮಿಳುನಾಡಿಗೆ ಬಿಡಬೇಕಾದ ಪರಿಸ್ಥಿತಿ ಉಂಟಾಗಿತ್ತು. ರಾಜ್ಯ ಸರ್ಕಾರ ಈ ಹಿಂದೆ ಉದ್ದೇಶಿಸಿದಂತೆ ಮೇಕೆದಾಟು ಬಳಿ ಕುಡಿಯುವ ನೀರಿನ ಉದ್ದೇಶದ ಸಮತೋಲನ ಜಲಾಶಯ ನಿರ್ಮಿಸಿಕೊಂಡಿದ್ದರೆ ಹೆಚ್ಚುವರಿ ನೀರನ್ನು ಸಂಗ್ರಹಿಸಬಹುದಾಗಿತ್ತು. ಆದರೆ, ಅಂತಹ ಅವಕಾಶವಿಲ್ಲದೆ ಅನಿವಾರ್ಯವಾಗಿ ಹೆಚ್ಚುವರಿ ನೀರನ್ನು ಕಾವೇರಿ ನದಿಗೆ ಬಿಡಬೇಕಾದ ಪರಿಸ್ಥಿತಿ ಉಂಟಾಗಿದೆ.
ಹೆಚ್ಚುವರಿ ನೀರನ್ನು ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೆರೆಗಳಿಗೆ ತುಂಬಿಸುವಂತಹ ಕೆಲಸ ಮಾಡಬೇಕಾಗಿದೆ ಎಂಬುದು ರೈತರು ಹಾಗೂ ಸಾರ್ವಜನಿಕರ ಅಭಿಮತವಾಗಿದೆ.
ಮುಂಗಾರು ಹಂಗಾಮಿನ ಅಂತ್ಯದವರೆಗೂ ಇನ್ನೂ ಜಲಾಯಶಗಳಿಂದ ನದಿಗೆ ನೀರು ಬಿಡದಿದ್ದರೂ ತಮಿಳುನಾಡಿಗೆ ಬಿಡಬೇಕಾಗಿರುವ ಪ್ರಮಾಣದಷ್ಟು ನೀರು ಹರಿದು ಹೋಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ನಿರೀಕ್ಷಿತ ಮಳೆಯಾಗುತ್ತಿಲ್ಲ:
ಜುಲೈ ತಿಂಗಳಿನಲ್ಲೇ ರಾಜ್ಯದ ಪ್ರಮುಖ ಜಲಾಶಯಗಳು ಭರ್ತಿಯಾಗಿದ್ದರೂ ಕೂಡ ರಾಜ್ಯದ ಒಳ ನಾಡಿನಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗುತ್ತಿಲ್ಲ. ಉತ್ತರ ಕರ್ನಾಟಕ ಸೇರಿದಂತೆ ಹಲವು ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆಯಾಗಿದೆ. ಮುಂಗಾರು ಕೂಡ ದುರ್ಬಲವಾಗಿದೆ. ಆದರೆ, ಕೆಲವೆಡೆ ಸ್ಥಳೀಯವಾಗಿ ಚದುರಿದಂತೆ ಸಾಧಾರಣ ಮಳೆ ಮುಂದುವರೆದಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಅತಿ ಹೆಚ್ಚು ಮಳೆಯಾಗುತ್ತಿದ್ದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲೂ ಮಳೆ ಪ್ರಮಾಣ ಇಳಿಮುಖವಾಗಿದೆ. ಸದ್ಯಕ್ಕೆ ರಾಜ್ಯದ ಒಳನಾಡಿನಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ