ಸಿಂಹಪಾಲು ಬಯಸಿದ್ದ ಜೆಡಿಎಸ್ ಗೆ ಬಿಗ್ ಶಾಕ್! 6 ಲೋಕಸಭಾ ಕ್ಷೇತ್ರ ಕೊಡಲು ಕಾಂಗ್ರೆಸ್ ನಿರ್ಧಾರ?

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಈಗಾಗಲೇ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ನಿರ್ಧಾರ ಕೈಗೊಂಡಿವೆ. ಆದರ ಸೀಟು ಹಂಚಿಕೆಯೇ ದೊಡ್ಡ ತಲೆನೋವಾಗಿದೆ,

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್ 2ರಿಂದ 10 ಕ್ಷೇತ್ರಗಳನ್ನು ಬಯಸಿದೆ, ಆದರೆ ಕಾಂಗ್ರೆಸ್ ಕೇವಲ ಆರು ಕ್ಷೇತ್ರಗಳನ್ನು ಮಾತ್ರ ಜೆಡಿಎಸ್ ಗೆ ಬಿಟ್ಟುಕೊಡಲು ನಿರ್ಧರಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಹಳೇ ಮೈಸೂರು ಭಾಗದಲ್ಲಿ  ಜೆಡಿಎಸ್ ಗೆ  ಸಿಂಹಪಾಲು ಬಯಸಿತ್ತು, ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರು-ಕೊಡಗು ಲೋಕಸಭೆ ಕ್ಷೇತ್ರವನ್ನು ಕೈ ವಶ ಮಾಡಿಕೊಳ್ಳಲು ಬಯಸಿದ್ದಾರೆ. ಸದ್ಯ ಈ ಕ್ಷೇತ್ರದಿಂದ ಬಿಜೆಪಿಯ ಪ್ರತಾಪ್ ಸಿಂಹ ಹಾಲಿ ಸಂಸದರಾಗಿದ್ದಾರೆ.

ಸೀಟು ಹಂಚಿಕೆ ವಿಷಯದಲ್ಲಿ ಪಕ್ಷದ ಭವಿಷ್ಯದ ಹಿತದೃಷ್ಟಿಯಿಂದ ಕಾಂಗ್ರೆಸ್ ಜೆಡಿಎಸ್ ಜೊತೆ ರಾಜೀ ಮಾಡಿಕೊಳ್ಳದಿರಲು ನಿರ್ಧರಿಸಿದೆ. ಚಾಮರಾಜನಗರ, ತುಮಕೂರು, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕ ಬಳ್ಳಾಪುರಗಳಲ್ಲಿ ಕಾಂಗ್ರೆಸ್ ಪಕ್ಷದ ಹಾಲಿ ಸಂಸದರಿದ್ದಾರೆ, ಒಂದು ವೇಳೆ ನಾವು ಈ ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟರೇ ನಮೆಗ ಕಷ್ಟವಾಗುತ್ತದೆ ಎಂದು ಕಾಂಗ್ರೆಸ್ ಶಾಸಕರೊಬ್ಬರು ತಿಳಿಸಿದ್ದಾರೆ,

ಹೀಗಾಗಿ ಹಾಸನ, ಮಂಡ್ಯ, ಮೈಸೂರು ಮತ್ತು ಬೆಂಗಳೂರಿನಲ್ಲಿ ಒಂದು ಕ್ಷೇತ್ರ, ಹಾಗೂ ಉತ್ತರ ಕರ್ನಾಟಕದಲ್ಲಿ ಒಂದೊಂದು ಕ್ಷೇತ್ರ ಜೆಡಿಎಸ್ ಗೆ ಕೊಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ, ಆದರೆ ಕರಾವಳಿ ಕರ್ನಾಟಕದ ಬಗ್ಗೆ ಇನ್ನೂ ನಿರ್ಧರಿಸಿಲ್ಲ,

ಹಾಸನ ಮತ್ತು ಮಂಡ್ಯ ಜೆಡಿಎಸ್ ನ ಮೊದಲ ಆದ್ಯತೆಗಳಾಗಿವೆ, ಏಕೆಂದರೇ ಈ ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಾಬಲ್ಯವಿದೆ, ಹಾಸನದಿಂದ ದೇವೇಗೌಡ ಹಾಲಿ ಸಂಸದರಾಗಿದ್ದಾರೆ. ಇನ್ನೂ ಮಂಡ್ಯದಿಂದ ಸಿ.ಎಸ್ ಪುಟ್ಟರಾಜು ಸಂಸದರಾಗಿ ಆಯ್ಕೆಯಾಗಿದ್ದರು, ಅವರು ಶಾಸಕರಾಗ ನಂತರ  ಕರ್ನಾಟಕದಿಂದ ಜೆಡಿಎಸ್ ನ ಒಬ್ಬರೇ ಒಬ್ಬ ಸಂಸದ ದೇವೇಗೌಡ ಆಗಿದ್ದಾರೆ. ಹೀಗಾಗಿ ಈ ಎರಡು ಕ್ಷೇತ್ರಗಳು ಜೆಡಿಎಸ್ ಪಾಲಾಗಲಿವೆ. ಆದರೇ ಜೆಡಿಎಸ್ ಮೈಸೂರು-ಕೊಡಗು ಕ್ಷೇತ್ರ ನೀಡಬೇಕೆಂದು ಬಯಸಿದೆ.

ಆದರೆ ಈ ಕ್ಷೇತ್ರವನ್ನು ಕಾಂಗ್ರೆಸ್ ತನ್ನ ಬಳಿಯೇ ಉಳಿಸಿಕೊಳ್ಳಲು ಬದ್ದವಾಗಿದೆ, ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರಿರುವ ಮಾಜಿ ಸಂಸದ ಸಿಎಚ್ ವಿಜಯ್ ಶಂಕರ್ ಅವರನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ವಿಜಯ್ ಶಂಕರ್  ಮೈಸೂರು- ಕೊಡಗು ಕ್ಷೇತ್ರ ನೀಡಬೇಕೆಂಬ ಷರತ್ತಿನೊಂದಿಗೆ ಕಾಂಗ್ರೆಸ್ ಸೇರಿದ್ದರು. ವಿಜಯ್ ಶಂಕರ್ ಮಾಜಿ ಸಂಸದ ಹಾಗೂ ಗೆಲ್ಲುವ ಅಭ್ಯರ್ಥಿ ಹೀಗಾಗಿ ನಾವು ಮೈಸೂರು ಕ್ಷೇತ್ರವನ್ನು ನಾವು ಬಿಟ್ಟುಕೊಡುವುದಿಲ್ಲ ಎಂದು ಶಾಸಕರೊಬ್ಬರು ತಿಳಿಸಿದ್ದಾರೆ,

ಜೆಡಿಎಸ್ ಗೆ ಗರಿಷ್ಠ ಆರು ಸೀಟುಗಳನ್ನು ಕೊಡಲು ಕಾಂಗ್ರೆಸ್ ನಿರ್ಧರಿಸಿದೆ,  ಆದರೆ ಈ ಬಗ್ಗೆ ಜೆಡಿಎಸ್ ಇನ್ನೂ ಮೌನ ವಹಿಸಿದೆ, ಎರಡು ಪಕ್ಷಗಳ ನಾಯಕರುಗಳ ಮಾತುಕತೆಯ ನಂತರ ಸೀಟು ಹಂಚಿಕೆ ನಡೆಯಲಿದೆ. ಇನ್ನೂ ಹಳೇ  ಮೈಸೂರು ಬಾಗದ ಜೊತೆಗೆ ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಸ್ಪರ್ದಿಸಲು ಬಯಸಿದೆ, ಜೆಡಿಎಸ್ ಕೇವಲ ದಕ್ಷಿಣ ಕರ್ನಾಟಕದ ಪಕ್ಷ ಎಂಬ ಆರೋಪವನ್ನು ತೊಡೆದು ಹಾಕಲು ನಿರ್ಧರಿಸಿದೆ

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ