ಪ್ರತ್ಯೇಕತೆ ವಿಷಯವಾಗಿ ನಡೆಯುತ್ತಿರುವ ಹೋರಾಟ ರಾಜಕೀಯ ಪ್ರೇರಿತ: ಉಪಮುಖ್ಯಮಂತ್ರಿ

ಬೆಂಗಳೂರು: ಜು-31: ಉತ್ತರ ಕರ್ನಾಟಕದ ಪ್ರತ್ಯೇಕತೆ ವಿಷಯವಾಗಿ ನಡೆಯುತ್ತಿರುವ ಹೋರಾಟ ರಾಜಕೀಯ ಪ್ರೇರಿತವಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿಯಲ್ಲಿ ವ್ಯತ್ಯಾಸವಾಗಿದ್ದರೆ ಅದನ್ನು ಸರಿಪಡಿಸಬಹುದು. ಅದನ್ನು ಬಿಟ್ಟು ಪ್ರತ್ಯೇಕತೆಯ ಧ್ವನಿ ಎತ್ತುತ್ತಿರುವುದು ಸರಿಯಲ್ಲ. ನೆಲ, ಜಲ, ಭಾಷೆ ವಿಷಯವಾಗಿ ವಿಭಜನೆ ಸರಿಯಲ್ಲ. ಕನ್ನಡ ಮಾತನಾಡುವವರು ಒಂದು ರಾಜ್ಯದಲ್ಲಿ ಇರಬೇಕು ಎಂಬ ಉದ್ದೇಶದಿಂದ ಏಕೀಕರಣವಾಯಿತು. ಏಕೀಕರಣಕ್ಕಾಗಿ ಹಲವಾರು ಮಹನೀಯರು ಹೋರಾಟ ಮಾಡಿ ಜೀವ ತ್ಯಾಗ ಮಾಡಿದ್ದಾರೆ. ಈಗ ಇಂತಹ ಹೋರಾಟಗಳು ಏಕೀಕರಣದ ಉದ್ದೇಶವನ್ನು ಕಡೆಗಣಿಸಿದಂತಾಗುತ್ತದೆ ಎಂದು ಹೇಳಿದರು.

ಹಿಂದೆ ಎಸ್.ಎಂ.ಕೃಷ್ಣ ಸರ್ಕಾರ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ನಂಜುಂಡಪ್ಪ ಆಯೋಗವನ್ನು ನೇಮಿಸಿತ್ತು. ಆಯೋಗ 114 ತಾಲ್ಲೂಕುಗಳು ಹಿಂದುಳಿದಿರುವ ಬಗ್ಗೆ ವರದಿ ನೀಡಿತ್ತು. ಅದನ್ನು ಆಧರಿಸಿ ಸರ್ಕಾರಗಳು ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತಂದಿವೆ. ಆದಾಗ್ಯೂ ಅಭಿವೃದ್ಧಿ ವಿಷಯದಲ್ಲಿ ವ್ಯತ್ಯಾಸಗಳಾಗಿರುವುದು ಕಂಡು ಬಂದಿದೆ. ಈ ಬಗ್ಗೆ ಚರ್ಚಿಸಿ ಸಮಸ್ಯೆ ಬಗೆಹರಿಸಬಹುದು. ಅದರಬದಲು ಪ್ರತ್ಯೇಕತೆಯ ಅಪಸ್ವರ ಸರಿಯಲ್ಲ ಎಂದು ಪರಮೇಶ್ವರ್ ಹೇಳಿದರು.

ಇದೇ ವೇಳೆ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಸಾವಿನ ಪ್ರಕರಣದ ಮರಣೋತ್ತರ ಪರೀಕ್ಷೆ ವರದಿ ಪೊಲೀಸರ ಕೈ ಸೇರಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಎಫ್‍ಎಸ್‍ಎಲ್ ವರದಿಯನ್ನು ನಿರೀಕ್ಷೆ ಮಾಡಲಾಗುತ್ತಿದೆ ಎಂದು ಪರಮೇಶ್ವರ್ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ