ರಾತ್ರೋರಾತ್ರಿ ಮರಗಳನ್ನು ಕಡಿದು ಉಳುಮೆ!

Varta Mitra News

ತುಮಕೂರು, ಜು.28- ಸರ್ಕಾರಿ ಜಾಗದಲ್ಲಿದ್ದ ಗಿಡ ಮರಗಳನ್ನು ರಾತ್ರೋರಾತ್ರಿ ಕಡಿದು ಅಲ್ಲಿ ಉಳುಮೆ ಮಾಡಿರುವ ಘಟನೆ ಇಲ್ಲಿನ ಹೆಬ್ಬೂರು ಬಳಿಯ ಕಣ್ಣುಕುಪ್ಪೆ ಗ್ರಾಮದ ಸರ್ಕಾರಿ ಶಾಲೆಯ ಹಿಂಭಾಗದಲ್ಲಿ ನಡೆದಿದೆ.
ಅರಣ್ಯ ಇಲಾಖೆ ಸೇರಿದ ಸರ್ವೆ ನಂ.4 ರಲ್ಲಿದ್ದ ಬೆಳೆ ಬಾಳುವ ಮರ-ಗಿಡಗಳನ್ನು ಕಡಿಯಾಗಿದ್ದು, ಸುಮಾರು 10 ಎಕರೆಯಷ್ಷು ಭೂಮಿಯಲ್ಲಿ ಉಳುಮೆ ಮಾಡಲಾಗಿದೆ.
ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ಕಣ್ಣುಕುಪ್ಪೆ ಗ್ರಾಮದ ಸರ್ಕಾರಿ ಶಾಲೆಯ ಹಿಂಭಾಗ ಹತ್ತಾರು ಎಕರೆ ಅರಣ್ಯ ಭೂಮಿ ಇದ್ದು, ಇಲ್ಲಿ ಗ್ರಾಮದ ಕೆಲವರು ಅಲ್ಪಸ್ವಲ್ಪ ಜಾಗವನ್ನು ಅಚ್ಚುಕಟ್ಟು ಮಾಡಿ ದನ ಕರುಗಳನ್ನು ಮೇಯಲು ಬಿಡುತ್ತಿದ್ದರು. ಆದರೆ ಜಾಗದಲ್ಲಿ ಉಳುಮೆ ಮಾಡುವ ಗೋಜಿಗೆ ಹೋಗಿರಲಿಲ್ಲ. ಆದರೆ ಇದೀಗ ಅರಣ್ಯ ಇಲಾಖೆಯ ಜಾಗವನ್ನು ಕೆಲವರು ಅತಿಕ್ರಮಣ ಮಾಡಿಕೊಂಡಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು 10 ಎಕರೆಗೂ ಹೆಚ್ಚು ಅರಣ್ಯ ಇಲಾಖೆಯ ಜಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದರೂ ಇದುವರೆಗೆ ಸ್ಥಳಕ್ಕೆ ಅರಣ್ಯ ಇಲಾಖೆಯ ಯಾವೊಬ್ಬ ಅಕಾರಿಯೂ ಬಂದಿಲ್ಲ. ಕೂಡಲೇ ಹಿರಿಯ ಅಕಾರಿಗಳು ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ