ಸೂಪರ್ ಸಿಎಂ ಪವರ್: ರಾತ್ರೋ ರಾತ್ರಿ 206 ಎಂಜಿನಿಯರ್ ಗಳ ಎತ್ತಂಗಡಿ!

ಬೆಂಗಳೂರು: ಸೂಪರ್ ಸಿಎಂ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣನವರು ಒಂದೇ ದಿನ ರಾತ್ರಿ ಬರೋಬ್ಬರಿ 206 ಎಂಜಿನಿಯರ್ ಗಳನ್ನು ಎತ್ತಂಗಡಿ ಮಾಡಿ ಮತ್ತೊಮ್ಮೆ ತಮ್ಮ ಸಾರ್ವಭೌಮ ಮೆರೆದಿದ್ದಾರೆ.

ಸಮ್ಮಿಶ್ರ ಸರ್ಕಾರದ ಸೂಪರ್ ಸಿಎಂ ಎಂದೇ ಖ್ಯಾತಿ ಹೊಂದಿರುವ ಎಚ್.ಡಿ ರೇವಣ್ಣನವರು, ಲೋಕೋಪಯೋಗಿ ಇಲಾಖೆಯಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಅವರು ಮಾಡಿದ್ದೇ ರೂಲ್ಸ್, ಹೇಳಿದ್ದೆ ಫೈನಲ್ ಆಗಿದೆ. ಅಧಿಕಾರ ಪಡೆದ ಎರಡೇ ತಿಂಗಳಲ್ಲಿ ಲೋಕೋಪಯೋಗಿ ಇಲಾಖೆಗಳ ಎಂಜಿನಿಯರ್‍ಗಳು ಎತ್ತಂಗಡಿಯಾಗಿದ್ದು. ಇದೀಗ ಮತ್ತೆ ರಾತ್ರೋ ರಾತ್ರಿ ಎಂಜಿನಿಯರ್ ಗಳ ಎತ್ತಂಗಡಿ ಮಾಡಿದ್ದಾರೆ.

ರೇವಣ್ಣನವರು ಕಳೆದ ಬುಧವಾರ ಇಲಾಖೆಯಲ್ಲಿ ಬಿಗ್ ಆಪರೇಷನ್ ಮಾಡಿದ್ದು, ಒಂದೇ ದಿನ ರಾತ್ರೋ ರಾತ್ರಿ ಬರೋಬ್ಬರಿ 206 ಎಂಜಿನಿಯರುಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಅವರ ಆಪ್ತ ಎಂಜಿನಿಯರ್ ಗಳು ಆಯಾ ಕಟ್ಟಿನ ಸ್ಥಳಗಳಿಗೆ ವರ್ಗಾವಣೆ ಭಾಗ್ಯ ಹೊಂದಿ ನಿಯೋಜನೆಗೊಂಡಿದ್ದಾರೆ ಎಂದು ತಿಳಿಬಂದಿದೆ.

ಲೋಕೋಪಯೋಗಿ ಇಲಾಖೆ ಸೇರಿದಂತೆ ಒಳನಾಡು ಬಂದರು ಸಾರಿಗೆ ಇಲಾಖೆಯಿಂದ ಆದೇಶ ರವಾನೆಯಾಗಿದ್ದು, ಈ ಹಿನ್ನೆಲೆಯಲ್ಲಿ 206 ಎಂಜಿನಿಯರ್ ಗಳನ್ನು ಏಕ ಕಾಲಕ್ಕೆ ವರ್ಗಾವಣೆ ಮಾಡಿದೆ. ವಿವಿಧ ಇಲಾಖೆಗಳಿಗೆ ನೇಮಕವಾಗಿದ್ದ ಎಂಜಿನಿಯರ್ ಗಳು, ಪ್ರಸ್ತುತ ಇಲಾಖೆಯಿಂದ ವಿವಿಧ ಸ್ಥಳಗಳಿಗೆ ವರ್ಗಾವಣೆಗೊಂಡಿದ್ದಾರೆ.

ಮಾಧ್ಯಮಗಳಿಗೆ ವರ್ಗಾವಣೆ ವಿಷಯ ಗೊತ್ತಾಗದಂತೆ ರೇವಣ್ಣ ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯು ಮಾಧ್ಯಮಗಳಿಂದ ಮಾಹಿತಿ ಮುಚ್ಚಿಟ್ಟಿದೆ. ಅಲ್ಲದೇ ಇನ್ನುಮುಂದೆ ಮಾಧ್ಯಮಗಳಿಗೆ ಯಾರು ಮಾಹಿತಿ ಕೊಡೋ ಹಾಗಿಲ್ಲ. ಮಾಹಿತಿ ಕೊಟ್ಟರೆ, ಅಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಲಿಖಿತ ಆದೇಶ ಹೊರಡಿಸಿ ಸೂಪರ್ ಸಿಎಂ ಎಚ್ಚರಿಸಿರುವುದಾಗಿ ತಿಳಿದುಬಂದಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ