ಬೆಂಗಳೂರು, ಜು.25- ಮಾಜಿ ಮುಖ್ಯಮಂತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ತಮ್ಮ ಕುಟುಂಬದ ಜೊತೆ ಮಹಾರುದ್ರಯಾಗ ಮತ್ತು ಶತ ಚಂಡಿಕಾ ಯಾಗ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಕಳೆದ ಭಾನುವಾರ-ಸೋಮವಾರ ಯಡಿಯೂರಪ್ಪನವರು ತಮ್ಮ ಪುತ್ರರಾದ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ಪುತ್ರಿಯರು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಕುಟುಂಬ ಸಮೇತರಾಗಿ ಮಹಾರುದ್ರ ಯಾಗ ಮತ್ತು ಶತ ಚಂಡಿಕಾಯಾಗ ಮಾಡಿಸಿದ್ದಾರೆ.
ಉಡುಪಿ ಸಮೀಪದ ಕುತ್ಯಾರು ಆನೆಗುಂದಿ ಮಠದಲ್ಲಿ ನಡೆದ ಮಹಾರುದ್ರ ಯಾಗ ಮತ್ತು ಶತ ಚಂಡಿಕಾ ಯಾಗವನ್ನು ಪುತ್ತೂರಿನ ಪುರೋಹಿತರಾದ ಶ್ರೀಕೃಷ್ಣ ಉಪಾಧ್ಯ ಮತ್ತು ಸುಳ್ಯ ಮೂಲದ ಮತ್ತೊಬ್ಬ ಪುರೋಹಿತರು ನಡೆಸಿಕೊಟ್ಟಿದ್ದಾರೆ.
ಅತ್ಯಂತ ಗೌಪ್ಯವಾಗಿ ನಡೆದಿರುವ ಈ ಯಾಗಕ್ಕೆ ಇದೀಗ ರಾಜಕೀಯ ವಲಯದಲ್ಲಿ ನಾನಾ ರೀತಿಯ ವ್ಯಾಖ್ಯಾನಗಳು ಕೇಳಿಬರುತ್ತಿವೆ.
ನಾಡಿದ್ದು ಶುಕ್ರವಾರ ಕೇತುಗ್ರಸ್ಥ -ರಕ್ತಚಂದ್ರ ಗ್ರಹಣ ಗೋಚರಿಸಲಿದೆ. ಈ ಬಾರಿ ಸಂಭವಿಸಲಿರುವ ಗ್ರಹಣವು ಮನುಷ್ಯ ಕುಲಕ್ಕೆ ಅನೇಕ ರೀತಿಯ ಸಮಸ್ಯೆಗಳನ್ನು ವೊಡ್ಡಲಿವೆ ಎಂಬುದು ಜ್ಯೋತಿಷಿಗಳ ವಾದ.
ಮೂರು ದಿನಗಳ ಹಿಂದಷ್ಟೇ ಶಿವಮೊಗ್ಗದಲ್ಲಿ ಯಡಿಯೂರಪ್ಪನವರು ತಮ್ಮ ಪಕ್ಷದ ಕಾರ್ಯಕರ್ತರು ಹಾಗು ಮುಖಂಡರಿಗೆ ಕೇತುಗ್ರಸ್ಥ ರಕ್ತಚಂದ್ರ ಗ್ರಹಣದಲ್ಲಿ ಯಾವುದೇ ರೀತಿಯ ಒಳ್ಳೆಯ ಕೆಲಸಗಳನ್ನು ಮಾಡಬೇಡಿ. ಗ್ರಹಣ ಮುಗಿಯುವವರೆಗೂ ಸುಮ್ಮನಿರಬೇಕೆಂದು ಸೂಚ್ಯವಾಗಿ ಹೇಳಿದ್ದರು.
ಈಗ ಕುಟುಂಬ ಸಮೇತರಾಗಿ ಯಾಗ ನಡೆಸಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಶತ ಚಂಡಿಕಾ ಯಾಗ ನಡೆಸಿದರೆ ತಮ್ಮ ಇಷ್ಟಾರ್ಥ ನೆರವೇರುತ್ತದೆ ಎಂಬುದು ಬಹುತೇಕರ ನಂಬಿಕೆಯಾಗಿದೆ. ತಾವು ಅಂದುಕೊಂಡಿದ್ದನ್ನು ಸಾಧಿಸಲು ಅನೇಕರು ಯಾಗ ಮಾಡುವುದು ಸಂಪ್ರದಾಯ. ಈಗ ಯಡಿಯೂರಪ್ಪನವರು ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ಈ ಯಾಗವನ್ನು ನಡೆಸಿದರೇ ಎಂಬ ಪ್ರಶ್ನೆ ಉದ್ಭವವಾಗಿದೆ.
ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತಂದು ಮುಖ್ಯಮಂತ್ರಿಯಾಗಬೇಕೆಂಬ ನಿರೀಕ್ಷೆಯಲ್ಲಿರುವ ಯಡಿಯೂರಪ್ಪ ಶತ ಚಂಡಿಕಾ ಯಾಗ ನಡೆಸಿರಬಹುದು ಎಂಬುದು ಆಪ್ತರ ಅಭಿಪ್ರಾಯವಾಗಿದೆ.
B S Yeddyurappa,Maharudra yaga,Shata Candika Yaga