ಬೆಳಗಾವಿ,ಜು.24- ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇರುವುದರಿಂದ ಲೋಕಸಭಾ ಚುನಾವಣೆಯಲ್ಲೂ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ಟಿಕೆಟ್ ಹಂಚಿಕೆ ಕುರಿತು ಸಮನ್ವಯ ಸಮಿತಿ ಹಾಗೂ ಮುಖ್ಯಮಂತ್ರಿ ಕುಮಾರ ಸ್ವಾಮಿ ಸೇರಿದಂತೆ ಎಲ್ಲರ ಜತೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಕೃಷ್ಣಭೆರೇಗೌಡ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು. ಆದರೆ, ಯಾರಿಗೆಷ್ಟು ಸೀಟು ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ ಎಂದು ಹೇಳಿದರು.
ಯಾವ ಕ್ಷೇತ್ರ ಯಾರಿಗೆ ಎನ್ನುವುದು ತೀರ್ಮಾನವಾಗಲು ಸಮಯವಿದೆ. ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಕೆಲವು ಕಡೆಗಳಲ್ಲಿ ಕಾಂಗ್ರೆಸ್‍ಗೆ ಸ್ವಲ್ಪ ತೊಂದರೆ ಆಗಬಹುದು. ಆದರೆ, ಹೊಂದಾಣಿಕೆ ಅವಶ್ಯವಾಗಿದೆ ಎಂದು ಹೇಳಿದರು.
ಸರ್ಕಾರ ಸುಭದ್ರವಾಗಿದೆ, ಮುಂದೆಯೂ ಇರುತ್ತದೆ. ಅನುಮಾನ ಬೇಡ. ಮುಖಂಡರು ಅವರವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರಿಗೆ ಪಕ್ಷದ ಹಿರಿಯರು ಬುದ್ಧಿ ಹೇಳುತ್ತಾರೆ ಎಂದರು.
ಪಕ್ಷ ಅಥವಾ ಈಗಿನ ಸರ್ಕಾರಕ್ಕೆ ಅಖಂಡ ಕರ್ನಾಟಕ ಇರಬೇಕು ಎನ್ನುವುದೇ ಆಗಿದೆ. ಸಮಸ್ಯೆಗಳಿದ್ದಲ್ಲಿ ಪರಿಹಾರ ಕಂಡುಕೊಳ್ಳಬೇಕು. ಉಲ್ಬಣ ಮಾಡಿ ಜನರ ಭಾವನೆ ಕೆರಳಿಸಬಾರದು. ಎಲ್ಲ ಸರ್ಕಾರಗಳಲ್ಲೂ ಉತ್ತರ ಕರ್ನಾಟಕಕ್ಕೆ ಅನುದಾನ, ಯೋಜನೆಗಳು ಸಿಕ್ಕಿವೆ. ನ್ಯೂನ್ಯತೆ ಇದ್ದರೆ ಅವುಗಳನ್ನು ಪರಿಹರಿಸಲು ನಾವೆಲ್ಲರೂ ಬದ್ಧವಾಗಿದ್ದೇವೆ ಎಂದು ಪ್ರತಿಕ್ರಿಯಿಸಿದರು.