ನನಗೆ ಅಧಿಕೃತ ನಿವಾಸ ಕೊಟ್ಟರೆ ಮಂಗಳವಾರವೂ ಹೋಗುತ್ತೇನೆ – ಸಚಿವ ಜಿ.ಟಿ.ದೇವೇಗೌಡ

ಮೈಸೂರು, ಜು.24-ನನಗೆ ಅಧಿಕೃತ ನಿವಾಸ ಕೊಟ್ಟರೆ ಮಂಗಳವಾರವೂ ಹೋಗುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು. ಬೆಳಿಗ್ಗೆ ನಗರದ ಮಹಾರಾಣಿ ಕಲಾ-ವಿಜ್ಞಾನ ಕಾಲೇಜಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ವಾರದ ಎಲ್ಲ ದಿನಗಳೂ ಒಳ್ಳೆಯದೇ… ಅಮಾವಾಸ್ಯೆ, ಆಷಾಢ, ಹುಣ್ಣಿಮೆ, ಮಂಗಳವಾರವೂ ಒಳ್ಳೆಯ ದಿನಗಳು. ನಾನು ಶುಭಕಾರ್ಯಕ್ಕೆ ಮುಹೂರ್ತ, ಒಳ್ಳೆಯ ದಿನವೆಂದು ಕಾಯುತ್ತಾ ಕೂರುವುದಿಲ್ಲ ಎಂದು ಹೇಳಿದರು. ಆಷಾಢ ಮಾಸದಲ್ಲಿ ಸಚಿವರು ಹೊಸ ಮನೆಗೆ ಹೋಗುವುದಿಲ್ಲ. ನೀವು ಏನು ಮಾಡುತ್ತೀರ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಜಿಟಿಡಿ ನನಗೆ ಇನ್ನು ಅಧಿಕೃತ ನಿವಾಸ ನೀಡಿಲ್ಲ, ನೀಡಿದರೆ ಯಾವ ದಿನವಾದರೂ ಸರಿ ಹೋಗುತ್ತೇನೆ ಎಂದರು.
ಹೊಸ ಕಟ್ಟಡ ನಿರ್ಮಾಣ:
ಶಿಥಿಲಾವಸ್ಥೆ ತಲುಪಿರುವ ಮೈಸೂರು ಮಹಾರಾಣಿ ಕಾಲೇಜನ್ನು ದುರಸ್ತಿ ಮಾಡಿಸಲು ಸಾಧ್ಯವಿಲ್ಲ. ಹಾಗಾಗಿ ನೂತನ ಕಟ್ಟಡವನ್ನು ಅತೀ ಶೀಘ್ರದಲ್ಲೇ ನಿರ್ಮಾಣ ಮಾಡಲಾಗುವುದು ಎಂದು ಇದೇ ವೇಳೆ ಜಿ.ಟಿ.ದೇವೇಗೌಡ ತಿಳಿಸಿದರು. ಕಾಲೇಜಿನ ಪ್ರತಿಯೊಂದು ವಿಭಾಗಕ್ಕೂ ಕಾಂಪ್ಲೆಕ್ಸ್ ಮಾದರಿಯಲ್ಲಿ ಪ್ರತ್ಯೇಕ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದ ಅವರು, ನಬಾರ್ಡ್ ವಲ್ರ್ಡ್ ಬ್ಯಾಂಕ್‍ನಿಂದ ಅನುದಾನಕ್ಕೆ ಮನವಿ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಿ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಲಾಗುವುದು ಎಂದರು. ಪುರಾತನ ಕಟ್ಟಡದಲ್ಲಿ ಮುಂದಿನ ವರ್ಷದವರೆಗೆ ಮಾತ್ರ ತರಗತಿಗಳನ್ನು ನಡೆಸುವಂತೆ ಸಚಿವರು ಕಾಲೇಜಿನ ಆಡಳಿತ ಮಂಡಳಿಗೆ ಸೂಚಿಸಿದರು.
ಕಾಲೇಜು ನಿರ್ಮಾಣಕ್ಕೆ ನಗರದಲ್ಲಿ ಐದು ಎಕರೆ ಭೂಮಿ ಖರೀದಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು ಗ್ರಂಥಾಲಯ, ಆಡಿಟೋರಿಯಂ, 65 ಕೊಠಡಿಗಳು ಹಾಗೂ ಕಾಂಪೌಂಡ್ ಅಗತ್ಯವಿದೆ ಎಂದು ಸಚಿವರಲ್ಲಿ ಮನವಿ ಮಾಡಿದರು. ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಉನ್ನತ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿ ಮಂಜುಳಾ, ಶಾಸಕ ನಾಗೇಂದ್ರ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ