ಬೆಂಗಳೂರು,ಜು.24- ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿನ ರೈತರ ಸಾಲ ಮಾಡಿರುವ ಹಿನ್ನೆಲೆಯಲ್ಲಿ ಸಂಪನ್ಮೂಲ ಕ್ರೋಢಿಕರಣಕ್ಕೆ ವಿಶೇಷ ಗಮನಹರಿಸಿರುವ ರಾಜ್ಯ ಸರ್ಕಾರ ಆಸ್ತಿಗಳ ಮಾರ್ಗಸೂಚಿ ದರವನ್ನು ಪರಿಷ್ಕರಿಸಲು ಮುಂದಾಗಿದೆ.
ನೂತನ ಮಾರ್ಗಸೂಚಿ ದರವು ಆ.1ರಿಂದಲೇ ರಾಜ್ಯಾದ್ಯಂತ ಜಾರಿಯಾಗಲಿದ್ದು, ಶೇ.15ರಿಂದ 20ರಷ್ಟು ಏರಿಕೆ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
ಒಂದು ವೇಳೆ ಮಾರ್ಗಸೂಚಿ ದರ ಪರಿಷ್ಕøತವಾದರೆ ರಾಜಧಾನಿ ಬೆಂಗಳೂರು ಸೇರಿದಂತೆ ಮಹಾನಗರ ಪಾಲಿಕೆಗಳಾದ ಮೈಸೂರು, ಮಂಗಳೂರು, ತುಮಕೂರು, ಶಿವಮೊಗ್ಗ , ದಾವಣಗೆರೆ, ಬಳ್ಳಾರಿ, ಕಲಬುರಗಿ, ವಿಜಾಪುರ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತಿತರ ಕಡೆ ಜಮೀನಿನ ಬೆಲೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ.
ಈಗಾಗಲೇ ಮಾರ್ಗಸೂಚಿ ದರವನ್ನು ಪರಿಷ್ಕರಿಸಲು ನಗರಾಭಿವೃದ್ದಿ ಇಲಾಖೆ ಸಿದ್ಧತೆಯನ್ನು ಪೂರ್ಣಗೊಳಿಸಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸರ್ಕಾರ ಅಧಿಕೃತ ಆದೇಶವನ್ನು ಹೊರಡಿಸಲಿದೆ.
ಈ ಹಿಂದೆ 2016ರಲ್ಲಿ ಮಾತ್ರ ಮಾರ್ಗಸೂಚಿ ದರವನ್ನು ಪರಿಷ್ಕರಿಸಲಾಗಿತ್ತು. ಪ್ರತಿ ವರ್ಷ ಪರಿಷ್ಕರಣೆ ಮಾಡಬೇಕೆಂಬ ಬೇಡಿಕೆ ಇದ್ದರೂ ಸಾರ್ವಜನಿಕರಿಗೆ ಹೊರೆಯಾಗಬಾರದೆಂಬ ಕಾರಣಕ್ಕಾಗಿ ಸರ್ಕಾರ ಈ ತೀರ್ಮಾನದಿಂದ ಹಿಂದೆ ಸರಿದಿತ್ತು.
ಈಗ ರೈತರ ಸಾಲ ಮನ್ನಾ ಮಾಡಿರುವ ಕಾರಣ ಸಂಪನ್ಮೂಲ ಕ್ರೋಢೀಕರಣಕ್ಕೆ ಆದ್ಯತೆ ನೀಡಿರುವ ಹಿನ್ನೆಲೆಯಲ್ಲಿ ಇದು ಅನಿವಾರ್ಯವಾಗಿದೆ ಎಂದು ತಿಳಿದುಬಂದಿದೆ. ಆಗಸ್ಟ್ 1ರಿಂದ ಜಾರಿಯಾದರೆ ನಿವೇಶನ, ಜಮೀನು ಹಾಗೂ ಮುದ್ರಣ ಮತ್ತು ನೋಂದಣಿ ಶುಲ್ಕವು ಏರಿಕೆಯಾಗಲಿದೆ.
ಒಂದು ಸಾವಿರ ಕೋಟಿ ಹೆಚ್ಚುವರಿ ಆದಾಯ ನಿರೀಕ್ಷೆ:
ಮಾರ್ಗಸೂಚಿ ದರ ಪರಿಷ್ಕøತವಾದರೆ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಮುದ್ರಣ ಮತ್ತು ನೋಂದಣಿ ಶುಲ್ಕದಿಂದ ಒಂದು ಸಾವಿರ ಕೋಟಿ ಆದಾಯ ಹೆಚ್ಚಳವಾಗಲಿದೆ ಎನ್ನಲಾಗುತ್ತಿದೆ. 2016-17ರಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಇಲಾಖೆಯಿಂದ ರಾಜ್ಯ ಸರ್ಕಾರ 9 ಸಾವಿರ ಕೋಟಿ ಆದಾಯವನ್ನು ನಿರೀಕ್ಷೆ ಮಾಡಿತ್ತು.
ಸರ್ಕಾರದ ನಿರೀಕ್ಷೆಯನ್ನು ಮೀರಿ ಕಳೆದ ವರ್ಷವೇ 9400 ಕೋಟಿ ಆದಾಯ ಬೊಕ್ಕಸಕ್ಕೆ ಬಂದಿತ್ತು. ಇತ್ತೀಚೆಗೆ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಮುದ್ರಣ ಮತ್ತು ನೋಂದಣಿ ಶುಲ್ಕ ಇಲಾಖೆಗೆ 10 ಸಾವಿರ ಕೋಟಿ ಆದಾಯವನ್ನು ನಿಗದಿಪಡಿಸಿದ್ದಾರೆ.
ಮಾರ್ಗಸೂಚಿ ದರ ಪರಿಷ್ಕøತವಾದರೆ ನಿರೀಕ್ಷೆಗೂ ಮೀರಿದ ಹೆಚ್ಚಿನ ಆದಾಯ ಹರಿದುಬರಲಿದೆ ಎಂಬುದು ಸರ್ಕಾರದ ವಿಶ್ವಾಸವಾಗಿದೆ. ಈ ಸಂಬಂಧ ಸದ್ಯದಲ್ಲೇ ಸಮಿತಿಯೊಂದನ್ನು ರಚನೆ ಮಾಡಲಿದ್ದು, ಈ ಸಮಿತಿ ನೀಡಲಿರುವ ವರದಿ ಅನುಸಾರ ಮಾರ್ಗಸೂಚಿ ದರ ನಿಗದಿಯಾಗಲಿದೆ. ಬಳಿಕವಷ್ಟೇ ಸಂಪುಟದಲ್ಲಿ ಚರ್ಚೆಯಾಗಿ ಅಧಿಕೃತ ಆದೇಶ ಹೊರಬೀಳಲಿದೆ.
Farmers Loans Manual,Asset Guidelines Revision,State Government