ಬರುವ ಶೈಕ್ಷಣಿಕ ವರ್ಷದಿಂದ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಆನ್‍ಲೈನ್ ವಿತರಣೆ

ಬೆಂಗಳೂರು,ಜು.24- ಪ್ರಶ್ನೆ ಪತ್ರಿಕೆ ಸೋರಿಕೆಗೆ ಶಾಶ್ವತ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ ಬರುವ ಶೈಕ್ಷಣಿಕ ವರ್ಷದಿಂದ ದ್ವಿತೀಯ ಪಿಯುಸಿಯ ಪ್ರಶ್ನೆ ಪತ್ರಿಕೆಗಳನ್ನು ಆನ್‍ಲೈನ್ ವಿತರಣೆ ಮಾಡಲು ಮುಂದಾಗಿದೆ.

ಇತ್ತೀಚೆಗೆ ದ್ವಿತೀಯ ಪಿಯುಸಿಯ ಪೂರಕ ಪರೀಕ್ಷೆ ವೇಳೆ ಆನ್‍ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡಿದ್ದರಿಂದ ಯಾವುದೇ ರೀತಿಯ ಗೊಂದಲ ಸೃಷ್ಟಿಯಾಗಿರಲಿಲ್ಲ. ಇದು ಬಹುತೇಕ ಯಶಸ್ವಿಯಾಗಿತ್ತು.

ಈಗ ಪದವಿಪೂರ್ವ ಶಿಕ್ಷಣ ಮಂಡಳಿ ಬರುವ ಮಾರ್ಚ್‍ನಲ್ಲಿ ನಡೆಯಲಿರುವ ಪರೀಕ್ಷೆಗೆ ರಾಜ್ಯದ ಒಂದು ಸಾವಿರ ಪರೀಕ್ಷಾ ಕೇಂದ್ರಗಳಲ್ಲಿ ಆನ್‍ಲೈನ್ ಮೂಲಕ ಪ್ರಶ್ನೆ ಪತ್ರಿಕೆಗಳನ್ನು ನೀಡುವ ಮೂಲಕ ಗೊಂದಲಗಳಿಗೆ ಇತಿಶ್ರೀ ಹಾಡಲು ಮುಂದಾಗಿದೆ.

ಈ ಸಂಬಂಧ ಸರ್ಕಾರಿ, ಅನುದಾನ ಹಾಗೂ ಅನುದಾನರಹಿತ ಕಾಲೇಜು ಮಂಡಳಿಯವರೊಂದಿಗೆ ಪದವಿಪೂರ್ವ ಶಿಕ್ಷಣ ಮಂಡಳಿಯ ಅಧಿಕಾರಿಗಳು ಮಾತುಕತೆ ನಡೆಸಿದ್ದು, ಪರೀಕ್ಷೆ ಕೇಂದ್ರಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸೂಚಿಸಿದ್ದಾರೆ.

ಮೊದಲ ಹಂತದಲ್ಲಿ ಆಯ್ದ ಒಂದು ಸಾವಿರ ಕೇಂದ್ರಗಳಲ್ಲಿ ಪರೀಕ್ಷಾ ದಿನವೇ ಆನ್‍ಲೈನ್‍ನಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಡೌನ್‍ಲೋಡ್ ಮಾಡಿಕೊಂಡು ವಿತರಣೆ ಮಾಡಲಾಗುವುದು. ಇದರಿಂದ ಸೋರಿಕೆ ತಡೆಗಟ್ಟುವಿಕೆ ಹಾಗೂ ಬಂಡಲ್ ಸಾಗಾಣಿಕೆ ವೆಚ್ಚ ಮತ್ತು ಸಂಶಯವೂ ನಿವಾರಣೆಯಾಗುತ್ತದೆ ಎಂಬುದು ಮಂಡಳಿಯವರ ಅಭಿಪ್ರಾಯ.
ಪರೀಕ್ಷಾ ಕೇಂದ್ರಗಳಲ್ಲಿ ಹೈಸ್ಪೀಡ್ ಇಂಟರ್‍ನೆಟ್ ಸೌಲಭ್ಯವನ್ನು ಇಟ್ಟುಕೊಳ್ಳಬೇಕು. ಪರೀಕ್ಷೆ ದಿನ ಅರ್ಧ ಗಂಟೆ ಮುಂಚಿತವಾಗಿ ಪ್ರಶ್ನೆ ಪತ್ರಿಕೆಗಳನ್ನು ಡೌನ್‍ಲೋಡ್ ಮಾಡಿಕೊಂಡು ವಿತರಣೆ ಮಾಡಬೇಕು. ಇದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.
ಈಗಾಗಲೇ ನಾವು ಆಡಳಿತ ಮಂಡಳಿಯವರೊಂದಿಗೆ ಮಾತುಕತೆ ನಡೆಸಿದ್ದೇವೆ. ಇದಕ್ಕೆ ಬಹುತೇಕರು ಸಮ್ಮತಿಸಿದ್ದಾರೆ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಹಿಂದೆ ಪ್ರಶ್ನೆ ಪತ್ರಿಕೆಗಳನ್ನು ಪ್ರಮುಖ ಕೇಂದ್ರಗಳಲ್ಲಿ ಮುದ್ರಿಸಿ ಬಳಿಕ ಅದನ್ನು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ(ಡಿಡಿಪಿಐ) ಕಚೇರಿಯಲ್ಲಿ ಇಡಲಾಗುತ್ತಿತ್ತು. ಪರೀಕ್ಷೆಯ ದಿನ ಇದನ್ನು ಹಿರಿಯ ಅಧಿಕಾರಿಗಳ ತೆರೆದು ನಂತರ ಕೇಂದ್ರಗಳಿಗೆ ವಿತರಣೆ ಮಾಡಲಾಗುತ್ತಿದ್ದರು. ಈ ಸಂದರ್ಭದಲ್ಲಿ ಕೆಲವು ಕಡೆ ಪ್ರಶ್ನೆ ಪತ್ರಿಕೆಗಳ ಬಂಡಲ್ ಬಿದ್ದು ಹೋಗುವುದು, ಹಣದ ಆಸೆಗಾಗಿ ಕೆಲವರು ಮಾರಾಟ ಮಾಡಿಕೊಳ್ಳುವುದು ಸೇರಿದಂತೆ ಹಲವು ರೀತಿಯ ಗೊಂದಲಗಳು ಉಂಟಾಗುತ್ತಿದ್ದವು. ಇದೆಲ್ಲದಕ್ಕೂ ಕಡಿವಾಣ ಹಾಕಲು ಇಲಾಖೆ ಮುಂದಾಗಿದೆ.

ಈಗಾಗಲೇ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯ, ರಾಜೀವ್ ಗಾಂಧಿ ವಿಜ್ಞಾನ ಮತ್ತು ಆರೋಗ್ಯ ವಿಶ್ವವಿದ್ಯಾನಿಲಯ ಸೇರಿದಂತೆ ಕೆಲವು ವಿವಿಗಳು ಆನ್‍ಲೈನ್ ಪ್ರಶ್ನೆ ಪತ್ರಿಕೆ ವ್ಯವಸ್ಥೆಯನ್ನು ಜಾರಿ ಮಾಡಿ ಯಶಸ್ವಿಯಾಗಿದೆ.

ಆನ್‍ಲೈನ್ ಪ್ರಶ್ನೆ ಪತ್ರಿಕೆ ಮಾದರಿಯನ್ನು ಜಾರಿ ಮಾಡಲು ಸರ್ಕಾರವು ಕೂಡ ಸಮ್ಮತಿಸಿದೆ. ಈ ಹಿಂದೆ 2016ರಲ್ಲಿ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿ ದೊಡ್ಡ ವಿವಾದ ಉಂಟಾಗಿತ್ತು.

ಇಲಾಖೆಯಲ್ಲಿರುವ ಕೆಲವು ಅಧಿಕಾರಿಗಳೇ ಮಧ್ಯವರ್ತಿಗಳ ಜೊತೆ ಶಾಮೀಲಾಗಿ ಯಾರಿಗೂ ಗೊತ್ತಾಗದಂತೆ ಪರೀಕ್ಷೆಗೂ ಮುನ್ನ ಸೋರಿಕೆ ಮಾಡಿ ತಮ್ಮ ಜೇಬುಗಳನ್ನುಭರ್ತಿ ಮಾಡಿಕೊಳ್ಳುತ್ತಿದ್ದಾರೆ.

ಆನ್‍ಲೈನ್ ವ್ಯವಸ್ಥೆ ಜಾರಿಯಾಗುವುದರಿಂದ ಇಂತಹ ಸಮಸ್ಯೆಗಳಿಗೆ ಕಡಿವಾಣ ಬೀಳಲಿದೆ ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ.

question paper leak,permanent breakdown,Second PUC Question Paper,Online

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ