ನವದೆಹಲಿ, ಜು.20-ಕೇಂದ್ರ ಸರ್ಕಾರದ ವಿರುದ್ಧ ಟಿಡಿಪಿ ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೇಲೆ ಚರ್ಚಿಸಲು ಸ್ಪೀಕರ್ ನೀಡಿರುವ ಸಮಯಾವಕಾಶ ಸಾಕಾಗದು ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಡಾ.ಎಂ.ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲೋಕಸಭೆಯಲ್ಲಿ ಇಂದು ಅವಿಶ್ವಾಸ ನಿರ್ಣಯ ಕುರಿತ ಚರ್ಚೆಗೆ ಮುನ್ನವೇ ಸದನದಲ್ಲಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ವಿರೋಧಪಕ್ಷಗಳಿಗೆ ನೀಡಿರುವ ಸಮಯಾವಕಾಶ ತುಂಬಾ ಕಡಿಮೆ. ಈ ವಿಷಯದಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು. ಅಲ್ಲದೇ, ಚರ್ಚೆಯನ್ನು ಪ್ರಶ್ನೋತ್ತರ ಕಲಾಪವಾಗಿ ಪರಿಗಣಿಸಬಾರದು ಎಂದು ಅವರು ಹೇಳಿದರು.
ತಮ್ಮ ಪಕ್ಷಕ್ಕೆ ಚರ್ಚಿಸಲು 32 ನಿಮಿಷಗಳನ್ನು ನೀಡಲಾಗಿದೆ. ಇದು ತೀರಾ ಕಡಿಮೆ. ಮಾತನಾಡುವವರಿಗೆ ಕೆಲವೇ ಕೆಲವು ನಿಮಿಷಗಳನ್ನು ನೀಡಲಾಗಿದೆ. ರೈತರು, ಮಹಿಳೆಯರು ಮತ್ತು ದಲಿತರ ಸಮಸ್ಯೆಗಳೂ ಸೇರಿದಂತೆ ಜ್ವಲಂತ ವಿಷಯಗಳನ್ನು ಪ್ರಸ್ತಾಪಿಸಲು ಈ ಸಮಯ ಸಾಕಾಗುವುದಿಲ್ಲ. ಕೆಲವು ಪಕ್ಷಗಳಿಗೆ 25 ನಿಮಿಷಗಳು ಮತ್ತು ಇನ್ನು ಕೆಲವಕ್ಕೆ 15 ನಿಮಿಷಗಳ ಅವಧಿ ನೀಡಲಾಗಿದೆ ಎಂದು ಖರ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಹೆಚ್ಚುವರಿ ಸಮಯವನ್ನು ಮಂಜೂರು ಮಾಡಲು ನಿಯಮಕ್ಕೆ ತಿದ್ದುಪಡಿಗಳನ್ನು ತರುವಂತೆ ಅವರು ಒತ್ತಾಯಿಸಿದರು. ಕಲಾಪ ಆರಂಭಕ್ಕೂ ಮುನ್ನ ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇದೇ ವಿಷಯವನ್ನು ಪ್ರಸ್ತಾಪಿಸಿದರು.