ಚಿಕ್ಕಮಗಳೂರು, ಜು.18- ಬ್ರಾಹ್ಮಣ ಮಹಾಸಭಾದ ವತಿಯಿಂದ 1.60 ಕೋಟಿ ರೂ. ವೆಚ್ಚದಲ್ಲಿ ನಗರದ ಬೈಪಾಸ್ ರಸ್ತೆಯಲ್ಲಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣ ಕಟ್ಟಡವನ್ನು ಜು.20ರಂದು ಉದ್ಘಾಟಿಸಲಾಗುವುದು ಎಂದು ಅಧ್ಯಕ್ಷ ಮಂಜುನಾಥ್ ಜೋಷಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೃಂಗೇರಿ ಜಗದ್ಗುರು ಶ್ರೀ ವಿದುಶೇಖರ್ ಭಾರತಿ ಮಹಾಸ್ವಾಮೀಜಿ ಕಟ್ಟಡ ಉದ್ಘಾಟಿಸಲಿದ್ದು, 20ರಂದು ಸಂಜೆ ಆಂಧ್ರ ಪ್ರದೇಶದಿಂದ ಧಾರ್ಮಿಕ ವಿಜಯ ಯಾತ್ರೆ ಮುಗಿಸಿಕೊಂಡು ಚಿಕ್ಕಮಗಳೂರಿಗೆ ಸ್ವಾಮೀಜಿಗಳು ಆಗಮಿಸಲಿದ್ದಾರೆ.
ಹಿರೇಮಗಳೂರಿನ ಸಮೀಪ ಅವರನ್ನು ಬರಮಾಡಿಕೊಂಡು ಕಾರ್ಯಕ್ರಮದ ಸ್ಥಳಕ್ಕೆ ಕರೆದೊಯ್ಯಲಾಗುವುದು ಎಂದರು. ವಾಣಿಜ್ಯ ಸಂಕೀರ್ಣದ ಪಕ್ಕದಲ್ಲಿಯೇ ಕಲ್ಯಾಣ ಭವನವನ್ನು ನಿರ್ಮಿಸಲು ಉದ್ದೇಶಿಸಿದ್ದು, ವಿಶಾಲವಾದ ಜಾಗ, ಪಾರ್ಕಿಂಗ್ ವ್ಯವಸ್ಥೆ ಇದೆ ಎಂದರು. ಸಮುದಾಯದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಸ್ಟೆಲ್ ನಿರ್ಮಾಣ ಮಾಡಲಾಗುವುದು. ಈಗಾಗಲೇ ಬ್ರಾಹ್ಮಣ ಮಹಾಸಭಾದ ವತಿಯಿಂದ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಧನ ನೀಡಲಾಗುತ್ತಿದೆ. ಸಮುದಾಯ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಶವ ಸಾಗಿಸುವ ವಾಹನವನ್ನು ಹೊಂದಿದ್ದೇವೆ. ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸಂಘಟನೆ ತೊಡಗಿಕೊಂಡಿದೆ ಎಂದರು. ಕಟ್ಟಡ ಸಮಿತಿಯ ಅಧ್ಯಕ್ಷ ಎ.ಎನ್.ಮೂರ್ತಿ, ಮಹಾಸಭಾದ ಮುಖಂಡರಾದ ದತ್ತಾತ್ರೇಯ, ಅಶ್ವಿನ್, ನಟರಾಜ್, ಸಿ.ಪ್ರಕಾಶ್ ಹಾಗೂ ನಾಗೇಂದ್ರ ಉಪಸ್ಥಿತರಿದ್ದರು.