ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯಿಂದ ಎರಡು ದಿನಗಳ ಕಾಲ ದೆಹಲಿ ಪ್ರವಾಸ

 

ಬೆಂಗಳೂರು, ಜು.17-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿನಿಂದ ಎರಡು ದಿನಗಳ ಕಾಲ ದೆಹಲಿ ಪ್ರವಾಸ ಕೈಗೊಂಡಿದ್ದು, ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ಯೋಜನೆಗಳಿಗೆ ಮಂಜೂರಾತಿ ಹಾಗೂ ಅನುದಾನ ಬಿಡುಗಡೆ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ.
ಇಂದು ಮಧ್ಯಾಹ್ನ ದೆಹಲಿಗೆ ತೆರಳಿದ ಮುಖ್ಯಮಂತ್ರಿ ಕೇಂದ್ರ ಕೃಷಿ ಸಚಿವ ರಾಮವಿಲಾಸ್ ಪಾಸ್ವಾನ್ ಅವರನ್ನು ಕೃಷಿ ಭವನದಲ್ಲಿ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ಸಂಜೆ ಸಾರಿಗೆ ಹಾಗೂ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ಸಾರಿಗೆ ಭವನದಲ್ಲಿ ಭೇಟಿಯಾಗಿ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಲಿದ್ದಾರೆ.
ಕಾವೇರಿ ನದಿ ನೀರು ನಿರ್ವಹಣಾ ಸಮಿತಿಯ ಬಗ್ಗೆಯೂ ಪ್ರಸ್ತಾಪ ಮಾಡುವ ಸಾಧ್ಯತೆಗಳಿವೆ. ನಾಳೆ ಮಧ್ಯಾಹ್ನ ಕೇಂದ್ರ ಕೃಷಿ ಸಚಿವ ರಾಧಾ ಮೋಹನ್‍ಸಿಂಗ್ ಅವರನ್ನು ಕೃಷಿ ಭವನದಲ್ಲಿ ಭೇಟಿಯಾಗಲಿದ್ದು, ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬಗ್ಗೆ ಚರ್ಚಿಸಲಿದ್ದಾರೆ. ಅಲ್ಲದೆ, ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡಿರುವ ಕೃಷಿ ಉತ್ಪನ್ನಗಳಿಗೆ ಬಿಡುಗಡೆಯಾಗಬೇಕಿರುವ ಅನುದಾನದ ಬಗ್ಗೆಯೂ ಸಮಾಲೋಚನೆ ನಡೆಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸಂಜೆ ಸೌತ್ ಬ್ಲಾಕ್ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ನಂತರ ಕಲ್ಲಿದ್ದಲು, ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ರಾಜ್ಯದ ಕಲ್ಲಿದ್ದಲು ಸಮಸ್ಯೆ, ರೈಲ್ವೆ ಯೋಜನೆಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕರ್ನಾಟಕ ಭವನದಲ್ಲಿ ನಾಳೆ ಸಂಜೆ ರಾಜ್ಯ ಪ್ರತಿನಿಧಿಸುವ ಲೋಕಸಭೆ ಹಾಗೂ ರಾಜ್ಯಸಭಾ ಸದಸ್ಯರೊಂದಿಗೆ ಸಭೆ ನಡೆಸಿ ಕೇಂದ್ರದಿಂದ ರಾಜ್ಯಕ್ಕೆ ಮಂಜೂರಾಗಬೇಕಿರುವ ಯೋಜನೆಗಳು, ಬಿಡುಗಡೆಯಾಗಬೇಕಿರುವ ಅನುದಾನ ಹಾಗೂ ಸಂಸತ್ ಅಧಿವೇಶನದಲ್ಲಿ ಪ್ರಸ್ತಾಪವಾಗಬೇಕಿರುವ ವಿಚಾರಗಳ ಬಗ್ಗೆ ಸಮಾಲೋಚನೆಯನ್ನು ಮುಖ್ಯಮಂತ್ರಿಗಳು ನಡೆಸಲಿದ್ದಾರೆ.
ಮುಖ್ಯಮಂತ್ರಿಗಳ ಜೊತೆ ರಾಜ್ಯ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ದೆಹಲಿಗೆ ತೆರಳಿ ಕೇಂದ್ರ ಸಾರಿಗೆ ಸಚಿವ, ಕೃಷಿ ಸಚಿವ, ರೈಲ್ವೆ ಸಚಿವ ಹಾಗೂ ರಕ್ಷಣಾ ಸಚಿವರನ್ನು ಭೇಟಿ ಮಾಡಲಿದ್ದಾರೆ.
ಜು.19 ರಂದು ಬೆಳಗ್ಗೆ ದೆಹಲಿಯಿಂದ ಬೆಂಗಳೂರಿಗೆ ಮುಖ್ಯಮಂತ್ರಿ ಮರಳಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ