ಕರ್ನಾಟಕ ನವ ಜಾಗೃತಿ ವೇದಿಕೆಯಿಂದ ರಾಜ್ಯವ್ಯಾಪಿ ಆಂದೋಲನ

 

ಬೆಂಗಳೂರು, ಜು.17-ದಲಿತರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಲು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರು ಕಾರಣ ಎಂದು ಆರೋಪಿಸಿರುವ ಕರ್ನಾಟಕ ನವ ಜಾಗೃತಿ ವೇದಿಕೆ ಈ ಕುರಿತು ರಾಜ್ಯವ್ಯಾಪಿ ಆಂದೋಲನ ಹಮ್ಮಿಕೊಂಡಿರುವುದಾಗಿ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ವೇದಿಕೆ ಅಧ್ಯಕ್ಷ ಅನಂತರಾಯಪ್ಪ ಮಾತನಾಡಿ, ನಾಳೆ ಬೆಳಗ್ಗೆ 11 ಗಂಟೆಗೆ ನಗರದ ಆನಂದರಾವ್ ವೃತ್ತದಲ್ಲಿರುವ ಗಾಂಧಿ ಪ್ರತಿಮೆ ಬಳಿ ಈ ಆಂದೋಲನಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ನಂತರ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಸ್ಥಳೀಯ ದಲಿತ ಸಂಘಟನೆಗಳ ಸಹಯೋಗದೊಂದಿಗೆ ಹಾಗೂ ಪ್ರಗತಿಪರ ಚಿಂತಕರ ನೆರವಿನೊಂದಿಗೆ ಬೇರೆ ಬೇರೆ ದಿನಗಳಂದು ಕಾರ್ಯಕ್ರಮ ನಡೆಸುವುದಾಗಿ ತಿಳಿಸಿದರು.
ದಲಿತರಿಗೆ ಮುಖ್ಯಮಂತ್ರಿ ಸ್ಥಾನವನ್ನು ತಪ್ಪಿಸುವ ದುರುದ್ದೇಶ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಇದೆ. ಐದು ವರ್ಷ ಎಚ್.ಡಿ.ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿ ಎಂದು ರಾಹುಲ್‍ಗಾಂಧಿ ಹೇಳಿದ್ದಾರೆ. ಆದರೆ ಮೈತ್ರಿ ಸರ್ಕಾರದ ಧರ್ಮದಂತೆ ಕುಮಾರಸ್ವಾಮಿ ಅವರಿಗೆ ಅರ್ಧ ಅವಧಿ ಕೊಟ್ಟು ಇನ್ನು ಅರ್ಧ ಅವಧಿಯನ್ನು ಕಾಂಗ್ರೆಸ್ ಪಕ್ಷ ತೆಗೆದುಕೊಳ್ಳಬೇಕಿತ್ತು. ಹಾಗೆ ಮಾಡಿದರೆ ದಲಿತರೊಬ್ಬರನ್ನು ಮುಖ್ಯಮಂತ್ರಿ ಪದವಿಯಲ್ಲಿ ಕೂರಿಸಬಹುದಿತ್ತು. ದಲಿತರಿಗೆ ಮುಖ್ಯಮಂತ್ರಿ ಪದವಿಯನ್ನು ತಪ್ಪಿಸಬೇಕೆಂದು 5 ವರ್ಷ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಘೋಷಣೆ ಮಾಡಿರುವುದು ದಲಿತರಿಗೆ ಮಾಡಿರುವ ಅನ್ಯಾಯ ಎಂದು ಆರೋಪಿಸಿದರು.
ಒಕ್ಕಲಿಗರಿಗೆ,ಲಿಂಗಾಯತರಿಗೆ, ಬ್ರಾಹ್ಮಣರಿಗೂ ಅನೇಕ ಬಾರಿ ಮುಖ್ಯಮಂತ್ರಿಯಾಗುವ ಅವಕಾಶವನ್ನು ಕಾಂಗ್ರೆಸ್ ನೀಡಿದೆ. ಆದರೆ ಶೇ.24 ರಷ್ಟು ಜನಸಂಖ್ಯೆಯುಳ್ಳ ದಲಿತರು ಕಳೆದ 70 ವರ್ಷಗಳಿಂದಲೂ ಕಾಂಗ್ರೆಸ್‍ಗೆ ಬೆಂಬಲ ನೀಡಿದರೂ ಪದವಿಯನ್ನು ನೀಡಿಲ್ಲ. ಕಾಂಗ್ರೆಸ್ ಪಕ್ಷದ ವರಿಷ್ಠರು ಪದೇ ಪದೇ ಅವಕಾಶವನ್ನು ತಪ್ಪಿಸುತ್ತಿದ್ದಾರೆ. ಆದ್ದರಿಂದ ನಮ್ಮ ಜನಾಂಗದವರು ಒಟ್ಟುಗೂಡಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್‍ಗಾಂಧಿ ಅವರ ಕುತಂತ್ರ ಹಾಗೂ ದಲಿತ ವಿರೋಧಿ ಧೋರಣೆಯನ್ನು ಖಂಡಿಸುತ್ತೇವೆ. ಕಾಂಗ್ರೆಸ್‍ನ ಷಡ್ಯಂತ್ರವನ್ನು ಶಾಂತಿಯುತ ಆಂದೋಲನದ ಮೂಲಕ ರಾಜ್ಯಾದ್ಯಂತ ಹಂತ ಹಂತವಾಗಿ ಪ್ರತಿಭಟಿಸುವುದಾಗಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ