ಚಿತ್ರಕಲೆ ಮತ್ತು ಸಂಗೀತಕ್ಕೆ ವಿಮರ್ಶೆಯ ಅಗತ್ಯವಿಲ್ಲ

 

ಬೆಂಗಳೂರು, ಜು.17-ಚಿತ್ರಕಲೆ ಮತ್ತು ಸಂಗೀತಕ್ಕೆ ವಿಮರ್ಶೆಯ ಅಗತ್ಯವಿಲ್ಲ. ಸಂಗೀತವನ್ನು ಕೇಳುವ ಮತ್ತು ಚಿತ್ರಕಲೆಯನ್ನು ನೋಡುವ ಆಸಕ್ತರ ಗ್ರಹಿಕೆಯ ಮೇಲೆ ಕಲಾವಿದನ ಸೃಜನಶೀಲತೆ ನಿರ್ಧಾರಗೊಳ್ಳುತ್ತದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿ ಚಂದ್ರಶೇಖರ ಕಂಬಾರ ಹೇಳಿದರು.
ನಗರದ ಚಿತ್ರಕಲಾ ಪರಿಷತ್‍ನಲ್ಲಿಂದು ಆಯೋಜಿಸಿದ್ದ ಜಯದೇವಣ್ಣ ಅವರ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಕಲೆಗೆ ಸೃಜನಶೀಲತೆಯೇ ಮೂಲ ಬಂಡವಾಳ. ಕಲಾವಿದರು ತಮ್ಮ ಕನಸುಗಳ ಬೆನ್ನತ್ತಿ ಅದನ್ನು ಸಾಕಾರಗೊಳಿಸಲು ಮಾಡುವ ಕೃಷಿ ಅತ್ಯುತ್ತಮ ಕಲಾಕೃತಿಗಳನ್ನು ಹೊರಹೊಮ್ಮಿಸುತ್ತದೆ. ಚಿತ್ರಕಲೆಯಲ್ಲಿ ಮನುಷ್ಯನ ಆತ್ಮದ ಭಾವನೆಗಳನ್ನು ಕುಂಚದಲ್ಲಿ ಅಭಿವ್ಯಕ್ತಿಸುವ ಮೂಲಕ ಮನುಷ್ಯನ ಅಸ್ತಿತ್ವದ ಸಾಕಾರಗಳನ್ನು ಕಲಾವಿದರು ಸಾಬೀತುಪಡಿಸುತ್ತಾರೆ ಎಂದು ಹೇಳಿದರು.
ಹಿರಿಯ ಕಲಾವಿದರಾದ ಸುಬ್ರಹ್ಮಣ್ಯ ಅವರು ಮಾತನಾಡಿ, ಕಲೆ ಮತ್ತು ಕಲಾವಿದರಿಗೆ ಯಾವುದೇ ಚೌಕಟ್ಟುಗಳಿರಬಾರದು. ಮತ್ತೊಬ್ಬರ ಮಾನ ಹಾನಿ, ಮನಸ್ಸಿಗೆ ನೋವಾಗುವ ಅಂಶಗಳನ್ನು ಹೊರತುಪಡಿಸಿ ಉಳಿದಂತೆ ಯಾವುದೇ ರೀತಿಯ ಚಿತ್ರಕಲೆಯಾದರೂ ಜನರು ಅದನ್ನು ಆಸ್ವಾದಿಸುತ್ತಾರೆ. ಹಾಗಾಗಿ ಕಲಾವಿದರು ಸಿದ್ಧ ಮಾದರಿಗೆ ಸೀಮಿತಗೊಳ್ಳದೆ ಮುಕ್ತವಾಗಿ ತಮ್ಮ ಸೃಜನಶೀಲತೆಯನ್ನು ಅಭಿವ್ಯಕ್ತಿಸುವಂತೆ ಕರೆ ನೀಡಿದರು.
ಕಲಾವಿದ ಜಯದೇವಣ್ಣ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ