ಶೇ.15ರಷ್ಟು ಬಸ್ ಪ್ರಯಾಣ ದರ ಏರಿಕೆಗೆ ಚಿಂತನೆ

 

ಬೆಂಗಳೂರು, ಜು.17- ಡೀಸೆಲ್ ಮತ್ತು ಪೆಟ್ರೋಲ್ ಮಾರಾಟದ ಮೇಲಿನ ತೆರಿಗೆ ಹೆಚ್ಚಳದಿಂದ ಬಸವಳಿದಿರುವ ಪ್ರಯಾಣಿಕರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸದ್ಯದಲ್ಲೇ ಮತ್ತೆ ಬಿಸಿ ಮುಟ್ಟಿಸಲು ಸಜ್ಜಾಗಿದೆ.
ಸಾರಿಗೆ ಸಂಸ್ಥೆಯು ನಷ್ಟಕ್ಕೆ ಸಿಲುಕಿರುವ ಕಾರಣ ಆರ್ಥಿಕ ಹೊರೆಯನ್ನು ಸರಿದೂಗಿಸಲು ಮುಂದಾಗಿದ್ದು, ಶೇ.15ರಷ್ಟು ಬಸ್ ಪ್ರಯಾಣ ದರವನ್ನು ಏರಿಕೆ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಕಳೆದ ವಾರ ಈಶಾನ್ಯ, ವಾಯುವ್ಯ, ನೈಋತ್ಯ ಹಾಗೂ ಆಗ್ನೇಯ ವಿಭಾಗದ ಸಾರಿಗೆ ಅಧಿಕಾರಿಗಳು ಸಭೆ ಸೇರಿ ನಷ್ಟದಲ್ಲಿರುವ ಸಂಸ್ಥೆಯನ್ನು ಸರಿದೂಗಿಸಬೇಕಾದರೆ ಬೆಲೆ ಏರಿಕೆ ಅನಿವಾರ್ಯ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ಹೀಗಾಗಿ ಪ್ರಯಾಣ ದರವನ್ನು ಶೇ.15ರಷ್ಟು ಏರಿಕೆ ಮಾಡಿದರೆ ಮಾತ್ರ ಸಂಸ್ಥೆಯನ್ನು ಮುನ್ನಡೆಸಲು ಸಾಧ್ಯ ಎಂದು ಸರ್ಕಾರಕ್ಕೆ ಬೆಲೆ ಏರಿಕೆ ಮಾಡಲೇಬೇಕೆಂದು ಪ್ರಸ್ತಾವನೆ ನೀಡಿದ್ದಾರೆ. ಆದರೆ, ಸರ್ಕಾರ ಬಸ್ ಪ್ರಯಾಣ ದರ ಹೆಚ್ಚಳ ಮಾಡುವ ಸಂಬಂಧ ಈವರೆಗೂ ಯಾವುದೇ ರೀತಿಯ ತೀರ್ಮಾನ ಕೈಗೊಂಡಿಲ್ಲ.
ನಮಗೆ ಸಾರಿಗೆ ಸಂಸ್ಥೆಯಿಂದ ಶೇ.15ರಷ್ಟು ಪ್ರಯಾಣ ದರ ಏರಿಕೆ ಮಾಡುವಂತೆ ಪ್ರಸ್ತಾವನೆ ಬಂದಿರುವುದು ನಿಜ. ಈಗಾಗಲೇ ನಾವು ಸರ್ಕಾರಕ್ಕೆ ವರದಿ ನೀಡಿದ್ದೇವೆ. ಮುಂದಿನ ತೀರ್ಮಾನವನ್ನು ಸಂಬಂಧಪಟ್ಟವರು ಕೈಗೊಳ್ಳಲಿದ್ದಾರೆ ಎಂದು ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಿ.ಬಸವರಾಜು ತಿಳಿಸಿದ್ದಾರೆ.
ಪ್ರತಿದಿನ ನಾಲ್ಕು ಸಂಸ್ಥೆಗಳಿಂದ ಸುಮಾರು 6 ಲಕ್ಷ ಲೀಟರ್ ಇಂಧನವನ್ನು ಖರೀದಿ ಮಾಡಬೇಕಾಗುತ್ತದೆ. ಇದರಿಂದ ಸಂಸ್ಥೆಗೆ 2 ರಿಂದ 2.5 ಕೋಟಿ ಖರ್ಚು ತಗುಲುತ್ತದೆ. ಕಳೆದ ಮೂರು ದಿನಗಳ ಹಿಂದೆ ಪ್ರತಿ ಲೀಟರ್‍ಗೆ 1ರೂ.12 ಪೈಸೆ ಏರಿಕೆಯಾಗಿರುವುದರಿಂದ ಮತ್ತಷ್ಟು ಹೊರೆಯಾಗಿರುವುದರಿಂದ ಅನಿವಾರ್ಯವಾಗಿ ನಾವು ದರ ಏರಿಕೆ ಮಾಡಲೇಬೇಕಾಗುತ್ತದೆ ಎಂದು ಹೆಸರು ಬಹಿರಂಗಪಡಿಸದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾರಣವೇನು..? ಪ್ರಯಾಣ ದರ ಏರಿಕೆ ಮಾಡಲು ನಿಗಮ ನೀಡಿರುವ ಕಾರಣದಂತೆ ನಾಲ್ಕು ಸಂಸ್ಥೆಗಳು ಬರೋಬ್ಬರಿ 600 ಕೋಟಿ ನಷ್ಟಕ್ಕೆ ಸಿಲುಕಿವೆ. ಅದರಲ್ಲೂ ಈಶಾನ್ಯ ಮತ್ತು ವಾಯುವ್ಯ ಸಂಸ್ಥೆಗಳು 500 ಕೋಟಿ ನಷ್ಟದಿಂದ ಸಿಬ್ಬಂದಿಗೆ ವೇತನ ಕೊಡುವುದೇ ದುಸ್ತರವಾಗಿದೆ.
ಮೂಲಗಳ ಪ್ರಕಾರ, ಬೆಂಗಳೂರು ವಿಭಾಗ ಹೊರತುಪಡಿಸಿದರೆ ಉಳಿದ ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ ಎಂದು ತಿಳಿದುಬಂದಿದೆ.
ಸಂಸ್ಥೆಯು ನಷ್ಟದಲ್ಲೇ ಮುನ್ನಡೆಯುತ್ತಿರುವುದರಿಂದ ಸಿಬ್ಬಂದಿಗೆ ವೇತನ, ಡೀಸೆಲ್, ಪೆಟ್ರೋಲ್, ಅಗತ್ಯ ವಸ್ತುಗಳ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ. ನಿರ್ವಹಣೆ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಲಾಭ ಮಾತ್ರ ಯಥಾಸ್ಥಿತಿಯಲ್ಲಿದೆ. ಇದರಿಂದ ಏನೇ ಸರ್ಕಸ್ ಮಾಡಿದರೂ ಸಂಸ್ಥೆಯನ್ನು ಸರಿದಾರಿಗೆ ತರಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಅಳಲು ತೋಡಿಕೊಂಡಿದ್ದಾರೆ.
2014ರಲ್ಲಿ ಮಾತ್ರ ಬಸ್ ದರವನ್ನು ಪರಿಷ್ಕರಣೆ ಮಾಡಲಾಗಿತ್ತು. ತದನಂತರ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಬಾರದೆಂಬ ಕಾರಣಕ್ಕಾಗಿ ನಾವು ದರವನ್ನು ಯಥಾಸ್ಥಿತಿಯಲ್ಲೇ ಮುಂದುವರಿಸಿದೆವು. ಒಂದೆಡೆ ಪ್ರಯಾಣಿಕರಿಗೆ ಉತ್ತಮವಾದ ಸೇವೆ ನೀಡಬೇಕು. ಮತ್ತೊಂದೆಡೆ ಖಾಸಗಿಯವರಿಗೆ ಪೈಪೆÇೀಟಿ ನೀಡಬೇಕು. ಪ್ರಯಾಣ ದರವನ್ನು ಏರಿಕೆ ಮಾಡದಿದ್ದರೆ ಸಂಸ್ಥೆಯನ್ನು ಮುನ್ನಡೆಸಲು ಸಾಧ್ಯವಿಲ್ಲ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.
ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇತ್ತೀಚೆಗೆ ರೈತರ ಸಾಲಮನ್ನಾ ಮಾಡುವ ಸಂಬಂಧ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ತೆರಿಗೆಯನ್ನು ಹೆಚ್ಚಳ ಮಾಡಿದ್ದರು. ಸಂಸ್ಥೆ ಮೊದಲೇ ನಷ್ಟದಲ್ಲಿರುವುದರಿಂದ ತೆರಿಗೆ ಭಾರವನ್ನು ಸಹಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ ಎಂಬುದು ಅಧಿಕಾರಿಗಳ ಅಳಲು.
ಮತ್ತೊಂದು ಮೂಲದ ಪ್ರಕಾರ, ಸಂಸ್ಥೆ ನೀಡಿರುವ ದರ ಹೆಚ್ಚಳ ಪ್ರಸ್ತಾವನೆಯನ್ನು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಗಂಭೀರವಾಗಿ ಪರಿಗಣಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜತೆ ಮಾತುಕತೆ ನಡೆಸಿ ಶೀಘ್ರದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆಂದು ತಿಳಿದುಬಂದಿದೆ.
ಹಾಗೊಂದು ವೇಳೆ ಸರ್ಕಾರ ದರವನ್ನು ಏರಿಕೆ ಮಾಡಿದರೆ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುವುದು ಖಚಿತ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ