ಕಲಬುರಗಿ, ಜು.15-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉತ್ತರ ಕುಮಾರ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಸರ್ಕಾರದ ಯೋಜನೆ ಮುಂದುವರಿಕೆ ಕುರಿತಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಿದ್ದರಾಮಯ್ಯ ಪತ್ರ ಬರೆದಿರುವ ವಿಷಯಕ್ಕೆ ಪ್ರತಿಕ್ರಿಯಿಸಿ, ಉತ್ತರ ಕುಮಾರ ಸಿದ್ದರಾಮಯ್ಯ ಪತ್ರ ಬರೆಯುವ ಮೊದಲು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದ್ದಾರೆ.
ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನಕ್ಕೂ ಅವರು ರಾಜೀನಾಮೆ ನೀಡಲಿ ಎನ್ನುವ ಮೂಲಕ ವಾಗ್ದಾಳಿ ನಡೆಸಿರುವ ಅವರು, ಕಾಂಗ್ರೆಸ್-ಜೆಡಿಎಸ್ ಒಗ್ಗೂಡಿ ಬಿಜೆಪಿ ಎದುರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿ. ನಾವು ಅವರನ್ನು ಎದುರಿಸಲು ಸಿದ್ಧರಾಗಿದ್ದೇವೆ ಎಂದರು.
ರಾಜ್ಯದ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನಗಳನ್ನು ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಹುಲ್ಗಾಂಧಿ ನಾಯಕತ್ವಕ್ಕೆ ನಮ್ಮ ಅಭ್ಯಂತರವಿಲ್ಲ ಎಂಬ ದೇವೇಗೌಡರ ಹೇಳಿಕೆಗೂ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಜೆಡಿಎಸ್ಗೆ ಸರಂಡರ್ ಆಗಿದೆ. ಅದೇ ರೀತಿ ಜೆಡಿಎಸ್ ಕಾಂಗ್ರೆಸ್ಗೆ ಸರಂಡರ್ ಆಗಿದೆ ಎಂದು ಕಿಡಿಕಾರಿದರು. ಸ್ವತಃ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಹುಲ್ಗಾಂಧಿಗೆ ಪುಣ್ಯಾತ್ಮ ಎಂದು ಕರೆದು ಅವರ ಋಣ ಹೇಗೆ ತೀರಿಸಲಿ ಎಂದು ಹೇಳಿದ್ದಾರೆ. ಆದರೆ ಪುಣ್ಯಾತ್ಮನೋ, ಪಾಪತ್ಮನೋ ಎಂಬುದನ್ನು ರಾಜ್ಯದ ಜನ ತೀರ್ಮಾನಿಸಲಿದ್ದಾರೆ ಎಂದರು.