ನವದೆಹಲಿ: ಭಾರತ ತಂಡದಲ್ಲಿ ಕೂಲ್ ಕ್ಯಾಪ್ಟನ್ ಎಂದೇ ಖ್ಯಾತಿ ಗಳಿಸಿದ್ದ ಮಹೇಂದ್ರ ಸಿಂಗ್ ಧೋನಿ ಶಾಂತ ಸ್ವಭಾವಿ.. ಆದರೆ ಇದೇ ಕೂಲ್ ಕ್ಯಾಪ್ಟನ್ ಕೋಪಕ್ಕೆ ತುತ್ತಾಗಿ ಭಾರತ ತಂಡದ ಸ್ಪಿನ್ ಸೆನ್ಸೇಷನ್ ಕುಲದೀಪ್ ಯಾದವ್ ಪತರಗುಟ್ಟಿ ಹೋಗಿದ್ದರಂತೆ.
ತಮ್ಮ ಶಾಂತಸ್ವಭಾವದಿಂದಾಗಿಯೇ ಧೋನಿ ಕೂಲ್ ಕ್ಯಾಪ್ಚನ್ ಎಂದು ಖ್ಯಾತಿ ಗಳಿಸಿದವರು. ಎಂತಹುದೇ ಪ್ರಚೋದನಕಾರಿ ವಾತಾವರಣವಿದ್ದರೂ ಅದನ್ನು ಶಾಂತ ಸ್ವಭಾವದಿಂದ ಧೋನಿ ಎದುರಿಸುತ್ತಾರೆ. ಅದೇ ಅವರ ಯಶಸ್ಸಿನ ಗುಟ್ಟು ಕೂಡ. ಆದರೆ ಇಂತಹ ಧೋನಿ ಕೂಡ ಹಲವು ಬಾರಿ ಕೋಪಗೊಂಡಿದ್ದಾರೆ. ಇವರ ಕೋಪಕ್ಕೆ ತುತ್ತಾದ ಸಹ ಆಟಗಾರರು ಪತರಗುಟ್ಟಿ ಹೋಗಿದ್ದು, ಇಂತಹುದೇ ತಮಗಾದ ಸಂದರ್ಭವನ್ನು ಕುಲದೀಪ್ ಯಾದವ್ ಹೇಳಿಕೊಂಡಿದ್ದಾರೆ.
ಖಾಸಗಿ ವಾಹಿನಿಯ ಕ್ರೀಡಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕುಲದೀಪ್ ಯಾದವ್ ಮಾತನಾಡುತ್ತಿದ್ದರು. ಕುಲದೀಪ್ ರೊಂದಿಗೆ ಯಜುವೇಂದ್ರ ಚಾಹಲ್ ಕೂಡ ಜೊತೆಗಿದ್ದರು. ನಿರೂಪಕ ಕಳೆದ ವರ್ಷ ಇಂದೋರ್ ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯದ ವೇಳೆ ನಡೆದ ಘಟನೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಲದೀಪ್ ಯಾದವ್, ನಿಜಕ್ಕೂ ಧೋನಿ ಅವರ ಕೋಪದಿಂದ ನಾನು ಅಂದು ಪತರ ಗುಟ್ಟಿ ಹೋಗಿದ್ದೆ.
ಆದರೆ ಅಂದು ಧೋನಿ ಕೋಪಗೊಂಡಿದ್ದರಿಂದ ಫೀಲ್ಡಿಂಗ್ ಸೆಟಪ್ ಚೇಂಜ್ ಮಾಡಿದ ಪರಿಣಾಮ ನಾನು ವಿಕೆಟ್ ಪಡೆಯುವಂತಾಗಿತ್ತು ಎಂದು ಯಾದವ್ ತಮ್ಮ ಅನುಭವ ಹೇಳಿಕೊಂಡಿದ್ದಾರೆ.
ಇಷ್ಟಕ್ಕೂ ಅಂದು ಆಗಿದ್ದೇನು?
ಕ್ಯಾಪ್ಟನ್ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಅಂದು ಉಪನಾಯಕ ರೋಹಿತ್ ಶರ್ಮಾ ತಂಡದ ಸಾರಥ್ಯವಹಿಸಿದ್ದರು.ಇಂದೋರ್ 2ನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ ತಂಡ ಅಂದು ಉತ್ತಮ ಸ್ಥಿತಿಯಲ್ಲಿತ್ತು. ನನ್ನ ಬೌಲಿಂಗ್ ವೇಳೆ ಪದೇ ಪದೇ ಎದುರಾಳಿ ಬ್ಯಾಟ್ಸಮನ್ ಗಳು ಸಿಕ್ಸರ್ ಹೊಡೆಯುತ್ತಿದ್ದರು. ಮೈದಾನ ಕೂಡ ಚಿಕ್ಕದಾಗಿತ್ತು. ಈ ವೇಳೆ ನನ್ನ ಬಳಿ ಬಂದ ಧೋನಿ ಫೀಲ್ಡಿಂಗ್ ನಲ್ಲಿ ಬದಲಾವಣೆ ಮಾಡಲು ಹೇಳಿದರು. ಆದರೆ ಆಗ ಇದ್ದ ಫೀಲ್ಡಿಂಗ್ ಸೆಟಪ್ ಸರಿಯಾಗಿದೆ ಎಂದು ನನಗನ್ನಿಸಿತ್ತು, ಇದನ್ನೇ ನಾನು ಧೋನಿ ಬಳಿ ಹೇಳಿದೆ. ಆಗ ಧೋನಿ ಕವರ್ ಫೀಲ್ಡರ್ ತೆಗೆದು ಡೀಪ್ ಗೆ ಹಾಕುವಂತೆಯೂ ಪಾಯಿಂಟ್ ನಲ್ಲಿ ಫೀಲ್ಜರ್ ನಿಲ್ಲಿಸುವಂತೆ ಸೂಚಿಸಿದರು. ಆದರೆ ಅದು ಸರಿಯಲ್ಲ. ಈಗಿರುವ ಫೀಲ್ಡಿಂಗ್ ಸರಿ ಇದೆ ಎಂದು ನಾನು ಹೇಳಿದೆ. ಆಗ ಧೋನಿ ನನ್ನನ್ನು ಗದರಿಸಿದರು.
ನನ್ನನ್ನೇನು ಹುಚ್ಚಾ ಎಂದು ಕೊಂಡೆಯಾ? 300 ಏಕದಿನ ಪಂದ್ಯಗಳನ್ನು ಆಡಿದ್ದೇನೆ.. ಎಂದು ಹೇಳಿದರು. ಅವರ ಒಂದು ಮಾತಿಗೇ ನಾನು ಪತರಗುಟ್ಟಿ ಹೋಗಿದ್ದೆ. ಬಳಿಕ ಫೀಲ್ಡಿಂಗ್ ಸೆಟಪ್ ಬದಲಾವಣೆ ಮಾಡಿ ಧೋನಿ ಹೇಳಿದಂತೆ ಫೀಲ್ಡರ್ ಗಳನ್ನು ಬದಲಾಯಿಸಿದೆ. ಅಚ್ಚರಿ ಎಂದರೆ ಫೀಲ್ಡಿಂಗ್ ಬದಲಾವಣೆ ಮಾಡಿದ ಬಳಿಕ ನನಗೆ ವಿಕೆಟ್ ಬಿತ್ತು.. ಅಂದಿನ ಪಂದ್ಯದಲ್ಲಿ ನಾನು 3 ವಿಕೆಟ್ ಪಡೆದು 52 ರನ್ ಗಳನ್ನು ನೀಡಿದ್ದೆ ಎಂದು ಕುಲದೀಪ್ ಯಾದವ್ ಹೇಳಿದ್ದಾರೆ.