ಖಾಸಗಿ ವಿವಿ ವಿಧೇಕಯಕ ಚರ್ಚೆಗೆ ಪಟ್ಟು

 

ಬೆಂಗಳೂರು, ಜು.12- ಖಾಸಗಿ ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕ ಮಂಡಿಸಲು ಬಿಜೆಪಿ ಶಾಸಕರು ವಿಧಾನಸಭೆಯಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದರು.
ವಿಧೇಯಕ ಮಂಡನೆ ಮಾಡಲು ಸಭಾಧ್ಯಕ್ಷ ರಮೇಶ್‍ಕುಮಾರ್ ಅವಕಾಶ ನೀಡಿದ ಸಂದರ್ಭದಲ್ಲಿ ಆಕ್ಷೇಪ ವೆತ್ತಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ವಿಧೇಯಕ ಮಂಡನೆಗೆ ಅವಕಾಶ ನೀಡುತ್ತಿದ್ದೀರಿ, ಕೇವಲ ವಿಧೇಯಕ ಮಂಡನೆಯಲ್ಲ. ವಿಧೇಯಕ ಮಂಡನೆ ಜತೆಗೆ ಪರ್ಯಾಲೋಚನೆ ಮತ್ತು ಒಪ್ಪಿಗೆ ಕೊಡಬೇಕಾಗಿದೆ. ಅಂತಹ ತುರ್ತು ಏನಿದೆ ಎಂದು ಆಕ್ಷೇಪಿಸಿದರು.
ಆಗ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ವಿಧಾನಸಭೆ ಮತ್ತು ವಿಧಾನಪರಿಷತ್‍ನ ಸದಸ್ಯರ ಒತ್ತಾಯದ ಮೇರೆಗೆ ವಿಧೇಯಕವನ್ನು ತರಲಾಗುತ್ತಿದೆ. ಅಲ್ಲದೆ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೃಷಿಗೆ ಸಂಬಂಧಿಸಿದ ಕೋರ್ಸ್ ಸ್ಥಗಿತಗೊಳಿಸುವಂತೆ ಹೋರಾಟ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಧೇಯಕ ತರಲಾಗುತ್ತಿದೆ. ಇದು ಕೃಷಿ ಇಲಾಖೆ ಅಥವಾ ಉನ್ನತ ಶಿಕ್ಷಣ ಇಲಾಖೆಯ ಆದೇಶ ಅಲ್ಲ. 2012ರಲ್ಲಿ ಖಾಸಗಿ ವಿವಿಯಲ್ಲಿ ಪದವಿ ಕೋರ್ಸ್‍ಗಳ ಬಗ್ಗೆ ವಿಧೇಯಕ ತರಲಾಗಿತ್ತು. ವಿಧೇಯಕಕ್ಕೆ ತಿದ್ದುಪಡಿ ತರುವ ಮೂಲಕವೇ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೃಷಿ ಕೋರ್ಸ್‍ಗಳನ್ನು ಸ್ಥಗಿತಗೊಳಿಸಬೇಕಾಗಿದೆ. ಈ ಸಂಬಂಧ ಕೃಷಿಸಚಿವರು ಮತ್ತು ಮುಖ್ಯಮಂತ್ರಿ ನೀಡಿದ ಭರವಸೆಗಳನ್ನು ಈಡೇರಿಸಲು ತಿದ್ದುಪಡಿ ವಿಧೇಯಕ ತರಲಾಗಿದೆ ಎಂದು ಸಮರ್ಥಿಸಿಕೊಂಡರು.
ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ಇದು ಕೃಷಿ ವಿವಿ ಸಂಬಂಧಿಸಿದ ವಿಷಯವಲ್ಲ. ರೈ ವಿವಿಗೆ ಸಂಬಂಧಿಸಿದ ವಿಧೇಯಕವಿದು ಎಂದು ಆಕ್ಷೇಪಿಸಿದರು.
ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಅವರು ವಿಧೇಯಕವನ್ನು ಎಲ್ಲಾ ಶಾಸಕರಿಗೂ ನೀಡಲಿ. ನಾಳೆ ಬೇಕಿದ್ದರೆ ವಿಧೇಯಕದ ಬಗ್ಗೆ ಚರ್ಚೆ ಮಾಡೋಣ ಎಂದು ಸಲಹೆ ಮಾಡಿದರು.
ಸಭಾಧ್ಯಕ್ಷ ರಮೇಶ್‍ಕುಮಾರ್ ಮಾತನಾಡಿ, ತರಾತುರಿಯಲ್ಲಿ ವಿಧೇಯಕ ತರಲು ಅವಕಾಶ ನೀಡುವುದಿಲ್ಲ ಎಂದು ಚರ್ಚೆಗೆ ತೆರೆ ಎಳೆದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ