ಅಧಿವೇಶನದಲ್ಲಿ ಚಾರಿತ್ರ್ಯ ವಧೆಗೆ ಅವಕಾಶವಿಲ್ಲ

 

ಬೆಂಗಳೂರು, ಜು.12- ಅಧಿವೇಶನದಲ್ಲಿ ಯಾರೊಬ್ಬರ ಚಾರಿತ್ರ್ಯವಧೆ ಮಾಡುವ ಕೆಲಸ ಮಾಡಿದರೆ ಪೀಠ ಸಹಿಸುವುದಿಲ್ಲ ಎಂದು ಸಭಾಧ್ಯಕ್ಷ ಕೆ.ಆರ್.ರಮೇಶ್‍ಕುಮಾರ್ ವಿಧಾನಸಭೆಯಲ್ಲಿ ಎಚ್ಚರಿಕೆ ನೀಡಿದರು.
ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಅವರು ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಇಂದಿರಾ ಕ್ಯಾಂಟಿನ್‍ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ವಿಚಾರ ಪ್ರಸ್ತಾಪಿಸಿದ್ದನ್ನು ಇಂದು ಮತ್ತೆ ಸದನದ ಗಮನಕ್ಕೆ ತಂದ ಸಂದರ್ಭದಲ್ಲಿ ಸಭಾಧ್ಯಕ್ಷರು ಈ ಎಚ್ಚರಿಕೆ ನೀಡಿದರು.
ವಿಧಾನಸಭೆಯಲ್ಲಿ ಹಿಟ್‍ಆಂಡ್‍ರನ್‍ಗೆ ಅವಕಾಶ ಕೊಡುವುದಿಲ್ಲ. ಯಾವುದೇ ಆರೋಪ ಮಾಡಬೇಕಿದ್ದರೂ ದಾಖಲೆಕೊಟ್ಟು ನಿಯಮಾವಳಿ ಪ್ರಕಾರ ನೋಟಿಸ್ ನೀಡಬೇಕು. ಆನಂತರ ಪರಿಶೀಲಿಸಿ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು. ಚಾರಿತ್ರ್ಯ ವಧೆ ನೋವನ್ನು ನಮ್ಮ ಇಡೀ ಕುಟುಂಬ ಅನುಭವಿಸಿದೆ. ನಿಮ್ಮ ಬಳಿ ಅಗತ್ಯ ಸಾಕ್ಷಾಧಾರಗಳು ಇದ್ದರೆ. ನಿಯಮಾವಳಿಗಳ ಪ್ರಕಾರ ನೋಟಿಸ್ ಕೊಟ್ಟರೆ ಅವಕಾಶ ನೀಡಲಾಗುವುದು. ಆದರೆ, ಸದನದಲ್ಲಿ ಹಿಟ್‍ಅಂಡ್‍ರನ್‍ಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಹಂತದಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ ಅವರು, ನಿರ್ದಿಷ್ಟ ಆರೋಪ ಮಾಡುವಾಗ ದಾಖಲೆಗಳನ್ನು ವಿಧಾನಸಭೆ ಕಾರ್ಯದರ್ಶಿಗಳಿಗೆ ಒದಗಿಸಿ ನಿಯಮಾವಳಿಗಳ ಪ್ರಕಾರ ಚರ್ಚೆ ಮಾಡುವುದಾದರೆ ಸರ್ಕಾರ ಸಿದ್ದವಿದೆ. ಎಷ್ಟೇ ಆಳವಾಗಿದ್ದರು ತಪ್ಪು ಮಾಡಿದವರೆಗೆ ಶಿಕ್ಷೆ ಕೊಡಿಸಲು ಸಿದ್ದ. ಒಂದು ವೇಳೆ ಶಾಸಕರು ಮಾಡಿದ ಆರೋಪ ಸಾಬೀತಾದರೆ ಆರೋಪಿತರಿಗೆ ಶಿಕ್ಷೆಯಾದರೆ ನಿಮಗೇ ರಾಜಕೀಯ ಲಾಭವಾಗಲಿದೆ ಎಂದು ರಾಮ್‍ದಾಸ್ ಅವರನ್ನು ಉದ್ದೇಶಿಸಿ ನುಡಿದರು.
ಮುಂದಿನ ಕಾರ್ಯಕಲಾಪಗಳನ್ನು ನಡೆಸಲು ಶಾಸಕರು ಸಹಕಾರ ನೀಡಬೇಕೆಂದು ಕೃಷ್ಣಬೈರೇಗೌಡ ಮನವಿ ಮಾಡಿದರು.
ಇದಕ್ಕೂ ಮುನ್ನ ಮಾತನಾಡಿದ ರಾಮದಾಸ್ ಅವರು, ನಿನ್ನೆ ಇಂದಿರಾಕ್ಯಾಂಟಿನ್ ಅವ್ಯವಹಾರಕ್ಕೆ ಸಂಬಂಧಿಸಿದ ವಿಚಾರ ಪ್ರಸ್ತಾಪ ಮಾಡಿದ್ದು, ಆ ಸಂದರ್ಭದಲ್ಲಿ ಸಭಾಧ್ಯಕ್ಷ ಪೀಠದ ಮುಂದಿನ ಬಾವಿಗಿಳಿದು ಧರಣಿ ಮಾಡಲಾಗಿತ್ತು. ಈ ಬಗ್ಗೆ ಚರ್ಚೆ ಅಪೂರ್ಣವಾಗಿದ್ದು, ಚರ್ಚೆಗೆ ಅವಕಾಶ ಕೊಡಬೇಕು ಎಂದರು.
ಇಂದಿರಾಕ್ಯಾಂಟಿನ್‍ನಲ್ಲಿ ಕಳಪೆ ಆಹಾರ ನೀಡಲಾಗಿದೆ. ಕೇವಲ 120 ಮಂದಿಗಷ್ಟೇ ತಿಂಡಿ ನೀಡಿ 500 ಮಂದಿಗೆ ನೀಡಿದ ದಾಖಲೆ ಸೃಷ್ಟಿಸಲಾಗಿದೆ ಎಂದು ರಾಮದಾಸ್ ಆರೋಪಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ