ಸಮಗ್ರ ಆರೋಗ್ಯ ಯೋಜನೆಯಡಿ 1.2 ಕೋಟಿ ಕಾರ್ಡ್ ವಿತರಣೆ

 

ಬೆಂಗಳೂರು, ಜು.9-ಈ ಹಿಂದೆ ಜಾರಿಯಲ್ಲಿದ್ದ ವಾಜಪೇಯಿ ಆರೋಗ್ಯಶ್ರೀ, ರಾಜೀವ್ ಆರೋಗ್ಯಭಾಗ್ಯ, ಮುಖ್ಯಮಂತ್ರಿ ಸಾಂತ್ವಾನ್ ಹರೀಶ್ ಯೋಜನೆ, ರಾಷ್ಟ್ರೀಯ ಸ್ವಾಸ್ಥ್ಯ ಕಾರ್ಯಕ್ರಮ, ಇಂದಿರಾ ಸುರಕ್ಷಾ ಯೋಜನೆ ಮತ್ತು ಯಶಸ್ವಿನಿ ಯೋಜನೆಗಳನ್ನು ವಿಲೀನಗೊಳಿಸಿ ಆರೋಗ್ಯ ಕರ್ನಾಟಕ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಸಂಬಂಧ ಫಲಾನುಭವಿಗಳಿಗೆ 1.2 ಕೋಟಿ ಆರೋಗ್ಯಕಾರ್ಡ್‍ಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್ ವಿಧಾನಪರಿಷತ್‍ನಲ್ಲಿ ತಿಳಿಸಿದರು.
ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಐವಾನ್ ಡಿಸೋಜಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆರೋಗ್ಯ ಕರ್ನಾಟಕ ಎಂಬ ಯುನಿವರ್ಸಲ್ ಹೆಲ್ತ್ ಸ್ಕೀಮ್‍ನ್ನು ಜೂ.1 ರಿಂದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಜಾರಿಗೊಳಿಸಲಾಗಿದೆ. ಕ್ಲಿಷ್ಟಕರ ದ್ವಿತೀಯ ಹಂತದ ಚಿಕಿತ್ಸೆಗಳು, ತೃತೀಯ ಹಂತದ ಚಿಕಿತ್ಸೆಗಳು ಮತ್ತು ತುರ್ತು ಚಿಕಿತ್ಸೆಗಾಗಿ ಇದುವರೆಗೆ 471 ಖಾಸಗಿ ಆಸ್ಪತ್ರೆಗಳನ್ನು ತಾತ್ಕಾಲಿಕವಾಗಿ ನೋಂದಣಿ ಮಾಡಲಾಗಿದೆ ಹಾಗೂ ಚಿಕಿತ್ಸೆ ನೀಡಲು ಅವಕಾಶವಿರುತ್ತದೆ. ಜೊತೆಗೆ 350 ಸರ್ಕಾರಿ ಆಸ್ಪತ್ರೆಗಳನ್ನೂ ಚಿಕಿತ್ಸೆ ಒದಗಿಸುವ ಸಲುವಾಗಿ ಎಂ ಪ್ಯಾನೆಲ್ ಮಾಡಲಾಗಿದೆ.
ಯಶಸ್ವಿನಿ ಯೋಜನೆಗೆ 300 ಕೋಟಿ ರೂ. ಅನುದಾನವಿದ್ದು, ಈಗ ಎಲ್ಲಾ ಆರೋಗ್ಯ ಯೋಜನೆಗಳನ್ನು ವಿಲೀನಗೊಳಿಸಿ ವಿನೂತನ ಯೋಜನೆಗಳನ್ನು ಜಾರಿಗೊಳಿಸಿರುವುದರಿಂದ 800 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ.
ಆರೋಗ್ಯ ಕರ್ನಾಟಕ ಯೋಜನೆಯು 1516 ಚಿಕಿತ್ಸಾ ಕ್ರಮಗಳನ್ನು ಒಳಗೊಂಡಿರುತ್ತದೆ. ಒಂದು ವೇಳೆ ಈ ಚಿಕಿತ್ಸೆಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲದಿದ್ದರೆ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಿಂದ ರೆಫರಲ್ ಮೂಲಕ ರೋಗಿಗಳು ಎಂ ಪ್ಯಾನೆಲ್ ಆದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಹೊಸ ಯೋಜನೆ ಕಾರ್ಡ್ ವಿತರಿಸುವವರೆಗೆ ವಾಜಪೇಯಿ ಆರೋಗ್ಯ ಶ್ರೀ ಯೋಜನೆ ಸೇರಿದಂತೆ ಹಳೆಯ ಕಾರ್ಡ್‍ಗಳನ್ನು ಬಳಸಬಹುದಾಗಿದೆ ಎಂದು ಸಚಿವರು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ