ಗ್ರಾಮ ಸಡಕ್ ಯೋಜನೆಯಲ್ಲಿ 1237 ಹಳ್ಳಿಗಳಿಗೆ ಸಂಪರ್ಕ

 

ಬೆಂಗಳೂರು, ಜು.9-ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಾಜ್ಯದಲ್ಲಿ 1237 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಲಾಗಿದೆ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೃಷ್ಣಭೆರೇಗೌಡ ವಿಧಾನಪರಿಷತ್‍ನಲ್ಲಿ ತಿಳಿಸಿದರು.
ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಯೋಜನೆಗೆ ಕೇಂದ್ರ ಸರ್ಕಾರ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 630 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿದ್ದು, ಅಷ್ಟೂ ಮೊತ್ತವನ್ನು ವೆಚ್ಚ ಮಾಡಲಾಗಿದೆ. ಬಳಸಲಾಗದೆ ಯಾವುದೇ ಮೊತ್ತವನ್ನು ಕೇಂದ್ರ ಸರ್ಕಾರಕ್ಕೆ ಹಿಂತಿರುಗಿಸಿರುವುದಿಲ್ಲ. ಈ ಯೋಜನೆಯಡಿ 2399.4 ಕಿ.ಮೀ.ಉದ್ದದ ರಸ್ತೆಯನ್ನು ನಿರ್ಮಿಸಲಾಗಿದೆ ಎಂದರು.
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಕೇಂದ್ರದ ಪಾಲು ಶೇ.60 ಮತ್ತು ರಾಜ್ಯದ ಪಾಲು ಶೇ.40ರಷ್ಟಿರುತ್ತದೆ. ಕೇಂದ್ರದ ಅನುದಾನ ನಿರೀಕ್ಷೆಯಲ್ಲಿಟ್ಟುಕೊಂಡು ನಾವು ಬಜೆಟ್‍ನಲ್ಲಿ ಅನುದಾನವನ್ನು ಬಿಡುಗಡೆ ಮಾಡಿರುತ್ತೇವೆ ಎಂದು ಹೇಳಿದರು.
ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರ ಈ ಯೋಜನೆಯಡಿ ಬಿಡುಗಡೆ ಮಾಡಿದ ಅನುದಾನ ಸಂಪೂರ್ಣ ಬಳಕೆಯಾಗಿದೆ. ರಸ್ತೆ ನಿರ್ವಹಣೆಗೆ 110 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ದೇಶದಲ್ಲೇ ಉತ್ತಮ ನಿರ್ವಹಣೆ ಮಾಡಿದೆ ಎಂಬ ಕೀರ್ತಿ ಕೂಡ ನಮ್ಮ ರಾಜ್ಯಕ್ಕೆ ಲಭಿಸಿದೆ ಎಂದು ಕೃಷ್ಣಭೆರೇಗೌಡ ಅವರು ಸದಸ್ಯರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ