ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಅವ್ಯವಹಾರ ನಡೆದಿಲ್ಲ

 

ಬೆಂಗಳೂರು, ಜು.9-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಹಾಗೂ ವಿವಿಧ ಸಂಸ್ಥೆಗಳ ಅನುದಾನದಡಿ ಸ್ಥಾಪಿಸಿರುವ ಶುದ್ಧ ನೀರು ಘಟಕಗಳಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೃಷ್ಣಭೆರೇಗೌಡ ವಿಧಾನಪರಿಷತ್‍ಗೆ ಸ್ಪಷ್ಟಪಡಿಸಿದರು.
ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ರಘುನಾಥ್ ಮಲ್ಕಾಪುರೆ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಂಚಾಯತ್‍ರಾಜ್ ಹಾಗೂ ವಿವಿಧ ಸಂಸ್ಥೆಗಳ ಅನುದಾನದಡಿ ಒಟ್ಟಾರೆಯಾಗಿ ಇಲ್ಲಿಯವರೆಗೆ 14,305 ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗಿದ್ದು, 13,597 ಘಟಕಗಳು ಕಾರ್ಯಾಚರಣೆಯಲ್ಲಿವೆ. 11,099 ಘಟಕಗಳು ಕಾರ್ಯನಿರ್ವಹಿಸುತ್ತಿವೆ. 2,498 ಘಟಕಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ ಎಂದು ವಿವರಿಸಿದರು.
2015-16 ಮತ್ತು 2016-17ರಲ್ಲಿ ಬೇಡಿಕೆ ಹೆಚ್ಚಾಗಿದ್ದರಿಂದ ತ್ವರಿತವಾಗಿ ಅನುಷ್ಠಾನಗೊಳಿಸುವ ಸಂಬಂಧ ಈ ಯೋಜನೆಯನ್ನು ಕೆಆರ್‍ಡಿಎಲ್‍ಗೆ ವಹಿಸಲಾಯಿತು. ಕೆಆರ್‍ಡಿಎಲ್ 55 ಕಂಪೆನಿಗಳ ಮೂಲಕ ಅನುಷ್ಠಾನ ಮಾಡುತ್ತಿದೆ. ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಇನ್ನು 3,793 ಘಟಕಗಳು ಪ್ರಗತಿಯಲ್ಲಿವೆ. ಸ್ಥಗಿತಗೊಂಡಿರುವ 2,498 ಘಟಕಗಳನ್ನು ದುರಸ್ತಿ ಮಾಡಲು 3 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ