ಅಮಲು ಮಿಶ್ರಿತ ಔಷಧ ದಂಧೆಯ ಬಗ್ಗೆ ಮಾಹಿತಿ ಇಲ್ಲ: ಶಿವಾನಂದ ಪಾಟೀಲ್

 

ಬೆಂಗಳೂರು, ಜು.9-ರಾಜಧಾನಿ ಬೆಂಗಳೂರು ಅಲ್ಲದೆ, ಜಿಲ್ಲಾ ಕೇಂದ್ರಗಳಲ್ಲೂ ಅಮಲು ಮಿಶ್ರಿತ ಔಷಧಿ, ಮಾತ್ರೆ, ಇಂಜೆಕ್ಷನ್ ಮಾರಾಟ ದಂಧೆ ರಾಜ್ಯಾದ್ಯಂತ ನಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಎಸ್.ಪಾಟೀಲ್ ವಿಧಾನಪರಿಷತ್‍ನಲ್ಲಿ ತಿಳಿಸಿದರು.
ಬಿಜೆಪಿ ಸದಸ್ಯೆ ತಾರಾ ಅನುರಾಧ ಅವರು ಪ್ರಶ್ನೋತ್ತರ ಕಲಾಪದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಔಷಧ ನಿಯಂತ್ರಣ ಇಲಾಖೆಯ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿ ಔಷಧಿಗಳನ್ನು ಮಾರಾಟ ಮಾಡುವ ಸಂಸ್ಥೆಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮಕೈಗೊಳ್ಳಲಾಗುತ್ತದೆ. ಯಾವುದೇ ಅಮಲು ಮಿಶ್ರಿತ ಔಷಧಿ, ಇಂಜೆಕ್ಷನ್‍ಗಳು ಮಾರಾಟವಾಗುತ್ತಿಲ್ಲ ಎಂದರು.
ಕಳೆದ ಮೂರು ವರ್ಷಗಳಲ್ಲಿ ಅಕ್ರಮ ಔಷಧಿ ಮಾರಾಟ ಮಾಡುತ್ತಿರುವ 43 ಮಳಿಗೆಗಳನ್ನು ಗುರುತಿಸಿ 25 ಮೊಕದ್ದಮೆಗಳನ್ನು ದಾಖಲಿಸಿ ಸೂಕ್ತ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.
ನಿಯಮ ಉಲ್ಲಂಘಿಸಿ ಔಷಧ ಮಳಿಗೆಯವರು ವೈದ್ಯರ ಸಲಹೆ ಚೀಟಿ ಇಲ್ಲದೆ, ಔಷಧಿ ನೀಡಿದ ಪ್ರಕರಣಗಳಲ್ಲಿ 77 ಔಷಧ ಮಾರಾಟ ಮಳಿಗೆಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ