ನರ್ಸಿಂಗ್ ಅಂಕಪಟ್ಟಿ ತಿದ್ದುಪಡಿಗೆ ತಕ್ಕ ಶಿಕ್ಷೆ

 

ಬೆಂಗಳೂರು, ಜು.9-ನರ್ಸಿಂಗ್ ಕಾಲೇಜುಗಳಲ್ಲಿ ಅಂಕಪಟ್ಟಿ ತಿದ್ದುಪಡಿ ಮಾಡಿರುವ ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಕಟ್ಟುನಿಟ್ಟಿನ ಕಾನೂನಿನ ಕ್ರಮಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ವಿಧಾನಪರಿಷತ್‍ನಲ್ಲಿ ತಿಳಿಸಿದರು.
ಪ್ರಶ್ನೋತ್ತರ ಕಲಾಪದಲ್ಲಿ ರಿಜ್ವಾನ್ ಅರ್ಷದ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಾಸ್ಮಟ್ ಗ್ರೂಪ್, ಬೆತೆಲ್ ಇನ್‍ಸ್ಟಿಟ್ಯೂಟ್ ಸೇರಿದಂತೆ ನರ್ಸಿಂಗ್ ಕಾಲೇಜುಗಳಲ್ಲಿ ನರ್ಸಿಂಗ್ ಕೋರ್ಸ್‍ನ ಅಂಕಪಟ್ಟಿ ತಿದ್ದುಪಡಿ ಮಾಡಿರುವ ಪ್ರಕರಣ ಮೇಲ್ನೋಟಕ್ಕೆ ಸಾಬೀತಾಗಿದ್ದು, ಹೆಚ್ಚಿನ ತನಿಖೆಗೆ ಸಿಐಡಿಗೆ ವಹಿಸಲಾಗಿದ್ದು, ವರದಿ ಬಂದ ತಕ್ಷಣ ಕಾನೂನು ರೀತಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದರು.
ಇನ್ನು ಹಲವು ನರ್ಸಿಂಗ್ ಕಾಲೇಜುಗಳು ಒಂದಕ್ಕೆ ಪರವಾನಗಿ ಪಡೆದು, ಮೂರ್ನಾಲ್ಕು ಕಾಲೇಜುಗಳು ನಡೆಸುವುದು, ನಕಲಿ ಅಂಕಪಟ್ಟಿ ಸೃಷ್ಟಿಸುವುದು ಸೇರಿದಂತೆ ಹಲವು ಅಕ್ರಮಗಳನ್ನು ನಡೆಸುತ್ತಿವೆ. ಈ ಎಲ್ಲದಕ್ಕೂ ಕಡಿವಾಣ ಹಾಕಬೇಕಾಗಿದೆ ಎಂದು ಹೇಳಿದರು.
ನಕಲಿ ವೈದ್ಯಕೀಯ ಪ್ರಮಾಣ ಪತ್ರಗಳನ್ನು ಸೃಷ್ಟಿಸಿ ಮಾರಾಟ ಮಾಡುವುದು ಮತ್ತು ಅಂಕಪಟ್ಟಿ ತಿದ್ದುವ ಪ್ರಕರಣದಲ್ಲಿ ಯಾವುದೇ ವೈದ್ಯಕೀಯ ಕಾಲೇಜುಗಳು ಭಾಗಿಯಾಗಿರುವುದು ಕಂಡುಬಂದಿಲ್ಲ.ಆದರೆ ನರ್ಸಿಂಗ್ ಕೋರ್ಸ್‍ನ ಅಂಕಪಟ್ಟಿ ತಿದ್ದುಪಡಿ ಮಾಡಿರುವ ಪ್ರಕರಣ ಸರ್ಕಾರದ ಗಮನಕ್ಕೆ ಬಂದಿದೆ. ತನಿಖೆ ನಂತರ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ