ಚಿಕ್ಕಮಗಳೂರು, ಜು.9-ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದ್ದು, ಭದ್ರಾ ನದಿ ಪಾತ್ರದಲ್ಲಿರುವ ಮೂರು ಆದಿವಾಸಿ ಕುಟುಂಬಗಳು ನದಿ ದಾಟಲಾರದೆ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಧಾರಾಕಾರವಾಗಿ ಭದ್ರಾ ತುಂಬಿ ಹರಿಯುತ್ತಿರುವುದರಿಂದ ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊಳೆಕುಡಿಗೆ ಗ್ರಾಮದ ಮೂರು ಆದಿವಾಸಿ ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿವೆ. ಸುಮಾರು 30 ವರ್ಷಗಳಿಂದ ಈ ಕುಟುಂಬಗಳು ತೆಪ್ಪದ ಮೂಲಕ ನದಿ ದಾಟಿ ನಗರಕ್ಕೆ ಕೆಲಸ ಕಾರ್ಯಗಳಿಗಾಗಿ ತೆರಳುತ್ತಿದ್ದವು. ಇದೀಗ ಮಳೆಯ ಆರ್ಭಟ ಜೋರಾಗಿದ್ದು, ಕಳೆದ ಎಂಟು ದಿನಗಳಿಂದ ಈ ಕುಟುಂಬ ನದಿ ದಾಟಲಾಗದೆ ಮನೆಯಲ್ಲೇ ಕುಳಿತುಕೊಳ್ಳುವಂತಾಗಿದೆ.
ನದಿ ದಾಟಲು ರಸ್ತೆಯಾಗಲಿ, ಸೇತುವೆಯಾಗಲಿ ಇಲ್ಲದ ಕಾರಣ ತೆಪ್ಪದ ಮೂಲಕ ಈ ಕುಟುಂಬದವರು ನದಿ ದಾಟಿ ಕೆಲಸ ಕಾರ್ಯಗಳಿಗೆ ಹೋಗುತ್ತಿದ್ದರು. ಆದರೆ ಧಾರಾಕಾರ ಮಳೆಯಿಂದ ಭದ್ರಾ ನದಿ ತುಂಬಿ ಹರಿಯುತ್ತಿದ್ದು, ತೆಪ್ಪದ ಮೂಲಕ ನದಿ ದಾಟಲಾಗದೆ ಕಂಗಾಲಾಗಿದ್ದಾರೆ.