ಸಚಿವ ಸ್ಥಾನಕ್ಕಾಗಿ ರಾಹುಲ್ ಮೊರೆ ಹೋದ ವಿಪ ಸದಸ್ಯರು

 

ಬೆಂಗಳೂರು, ಜು.7-ವಿಧಾನಪರಿಷತ್‍ನ ಹಿರಿಯ ಸದಸ್ಯರಿಗೆ ಸಚಿವ ಸ್ಥಾನ ನೀಡಬೇಕು, ಕಾಂಗ್ರೆಸ್ ಪಕ್ಷಕ್ಕೆ ಸಭಾಪತಿ ಸ್ಥಾನ ನೀಡುವುದೂ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕೆಂದು ಪರಿಷತ್‍ನ ಕಾಂಗ್ರೆಸ್ ಸದಸ್ಯರು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರಿಗೆ ಇ-ಮೇಲ್ ಮೂಲಕ ಮನವಿ ಮಾಡಿದ್ದಾರೆ.
ಮೇಲ್ಮನೆಯಲ್ಲಿ ಕಾಂಗ್ರೆಸ್ ಸದಸ್ಯ ಬಲ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಭಾಪತಿ ಸ್ಥಾನವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಬೇಕು. ಅಲ್ಲದೆ, ಪರಿಷತ್‍ನ ಸದಸ್ಯರೊಬ್ಬರನ್ನು ಸಚಿವರನ್ನಾಗಿ ಮಾಡಿ ಸಭಾನಾಯಕ ಸ್ಥಾನವನ್ನು ನೀಡಬೇಕೆಂದು ಆಗ್ರಹಿಸಿ ಮೇಲ್ಮನೆ ಸದಸ್ಯರಾದ ಎಸ್.ಆರ್.ಪಾಟೀಲ್, ಬಿ.ಎಸ್.ಉಗ್ರಪ್ಪ, ಎಚ್.ಎಂ.ರೇವಣ್ಣ, ನಾರಾಯಣಸ್ವಾಮಿ, ರಿಜ್ವಾನ್ ಅರ್ಷದ್, ಸಿ.ಎಂ.ಲಿಂಗಪ್ಪ, ಬೋಸರಾಜ್,ವಿಜಯ್‍ಸಿಂಗ್, ಆರ್.ಬಿ.ತಿಮ್ಮಾಪುರ್, ಧರ್ಮಸೇನಾ ಸೇರಿದಂತೆ 24 ಸದಸ್ಯರು ಸಹಿ ಮಾಡಿ ಎಐಸಿಸಿ ಅಧ್ಯಕ್ಷರಿಗೆ ಇ-ಮೇಲ್ ರವಾನಿಸಿದ್ದಾರೆ.
ಅಲ್ಲದೆ, ಎಐಸಿಸಿ ಅಧ್ಯಕ್ಷರಾದ ರಾಹುಲ್‍ಗಾಂಧಿಯವರೊಂದಿಗೆ ಈ ಬಗ್ಗೆ ಚರ್ಚಿಸಲು ಸಮಯಾವಕಾಶ ಕೊಡಿಸಬೇಕೆಂದು ಪಕ್ಷದ ಉಸ್ತುವಾರಿ ವೇಣುಗೋಪಾಲ್ ಅವರಿಗೆ ಮನವಿ ಕೂಡ ಮಾಡಿಕೊಂಡಿದ್ದಾರೆ.
ಮೇಲ್ಮನೆಯಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ ಹೆಚ್ಚಾಗಿರುವುದರಿಂದ ಸಮ್ಮಿಶ್ರ ಸರ್ಕಾರದಲ್ಲಿ ಸಭಾಪತಿ ಸ್ಥಾನವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಡಬೇಕು.ಮೇಲ್ಮನೆ ಸದಸ್ಯರೊಬ್ಬರಿಗೆ ಸಚಿವ ಸ್ಥಾನ ನೀಡಬೇಕ, ಈ ಬಗ್ಗೆ ಈಗಾಗಲೇ ಹಲವಾರು ಬಾರಿ ಮನವಿ ಕೂಡ ಮಾಡಲಾಗಿದೆ.
ಹೊಸದಾಗಿ ಸಚಿವರಾಗಿರುವ ಜಯಮಾಲಾ ಅವರನ್ನು ಸಭಾನಾಯಕಿಯನ್ನಾಗಿ ಮಾಡಿರುವುದಕ್ಕೆ ಹಲವಾರು ಸದಸ್ಯರು ಅಸಮಾಧಾನಗೊಂಡು ಹೈಕಮಾಂಡ್‍ಗೆ ದೂರು ನೀಡಿದ್ದಾರೆ.
ಅಲ್ಲದೆ, ಕೆಲವರು ಸದನದ ಕಲಾಪದಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳದೆ ಪರೋಕ್ಷ ಪ್ರತಿಭಟನೆ ಕೂಡ ನಡೆಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ