ಎನ್ ಟಿಎನಿಂದ ಎನ್ ಇಟಿ, ನೀಟ್, ಜೆಇಇ ಪರೀಕ್ಷೆ: ಜಾವೇಡಕರ್

ನವದೆಹಲಿ: ವಿವಿಧ ಪ್ರವೇಶ ಪರೀಕ್ಷೆಗಳಿಗಾಗಿಯೇ ರಚಿಸಲಾಗಿರುವ ನೂತನ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ-ಎನ್‍ಟಿಎ) ಎನ್ ಇಟಿ, ನೀಟ್ ಹಾಗೂ ಜೆಇಇ ಮುಖ್ಯ ಪರೀಕ್ಷೆಗಳನ್ನು ನಡೆಸಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರು ಶನಿವಾರ ಹೇಳಿದ್ದಾರೆ.
ಇದುವರೆಗ ಎನ್ ಇಟಿ, ನೀಟ್ ಹಾಗೂ ಜೆಇಇ ಪರೀಕ್ಷೆಗಳನ್ನು ಸಿಬಿಎಸ್ ಇ ನಡೆಸುತ್ತಿತ್ತು. ಇನ್ನು ಮುಂದೆ ಪರೀಕ್ಷೆಗಳನ್ನು ಎನ್ ಟಿಎ ನಡೆಸಲಿದ್ದು, ಎನ್ ಇಟಿ ಡಿಸೆಂಬರ್ ನಲ್ಲಿ ಮತ್ತು ಜೆಇಇ ವರ್ಷದ ಎರಡು ಬಾರಿ, ಜನವರಿ ಮತ್ತು ಏಪ್ರಿಲ್ ನಲ್ಲಿ ನಡೆಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಎನ್ ಟಿಎ ಅಂತರಾಷ್ಟ್ರೀಯ ಮಾನದಂಡಗಳನ್ನು ಅನುಸರಿಸಿ ಅತ್ಯಂತ ಸುರಕ್ಷಿತವಾಗಿ ಈ ಪರೀಕ್ಷೆಗಳನ್ನು ನಡೆಸಲಿದೆ. ಇನ್ನು ಮುಂದೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗುವುದಿಲ್ಲ ಮತ್ತು ಇದು ವಿದ್ಯಾರ್ಥಿ ಸ್ನೇಹಿಯಾಗಿದೆ ಎಂದು ಜಾವಡೇಕರ್ ವರದಿಗಾರರಿಗೆ ತಿಳಿಸಿದ್ದಾರೆ.
ಪರೀಕ್ಷೆಗಳು ಸಂಪುರ್ಣ ಕಂಪ್ಯೂಟರ್ ಆಧಾರಿತವಾಗಿದ್ದು, ನಾಲ್ಕು ಐದು ದಿನ ಪರೀಕ್ಷೆಗಳು ನಡೆಯುತ್ತವೆ. ವಿದ್ಯಾರ್ಥಿಗಳು ತಮಗೆ ಅನುಕೂಲವಾದ ದಿನಾಂಕವನ್ನು ಆಯ್ಕೆ ಮಾಡಿಕೊಂಡು ಕಂಪ್ಯೂಟರ್ ಕೇಂದ್ರಗಳಿಗೆ ಹೋಗಿ ಪರೀಕ್ಷೆ ಬರೆಯಬಹುದಾಗಿದೆ ಎಂದು ಅವರು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ