ಶಾಕಿಂಗ್: ದೆವ್ವದ ಮೇಲೆ ಎಫ್ಐಆರ್ ದಾಖಲಿಸಿದ ಪೊಲೀಸರು..!

ವಡೋದರಾ: ನಂಬಲು ಕಷ್ಟ ಆದರೂ ಇದು ಸತ್ಯ. ಗುಜರಾತ್ ಪೊಲೀಸರು ಆತ್ಮಹತ್ಯೆ ಯತ್ನ ಪ್ರಕರಣ ಸಂಬಂಧ ದೆವ್ವದ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ವಡೋದರಾ ಜಿಲ್ಲೆಯ ಚೋಕರಿ ಗ್ರಾಮದಲ್ಲಿ ಮಹಿಳೆಯೊಬ್ಬರು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕುಟುಂಬಸ್ಥರು ಆಕೆಯನ್ನು ಕಾಪಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸುಟ್ಟ ಗಾಯಗಳಿಗೆ ಒಳಗಾಗಿರುವ ಮಹಿಳೆ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ.
ಆತ್ಮಹತ್ಯೆ ಸಂಬಂಧ ಪೊಲೀಸರು ಮಹಿಳೆಯನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಹಿಳೆಯ ಆತ್ಮಹತ್ಯೆ ಕಾರಣ ತಿಳಿದು ಪೊಲೀಸರೇ ದಂಗಾಗಿದ್ದಾರೆ. ಪ್ರೇತಾತ್ಮವೊಂದು ಆತ್ಮಹತ್ಯೆ ಮಾಡಿಕೊಳ್ಳುವಂತೆ ನನ್ನನ್ನು ಪ್ರೇರೇಪಿಸಿತು ಎಂದು ಮಹಿಳೆ ಹೇಳಿಕೆ ನೀಡಿದ್ದಾಳೆ. ಆತ್ಮಹತ್ಯೆ ಮಾಡಿಕೊಳ್ಳಲು ದೆವ್ವ ಸೂಚನೆ ನೀಡಿತು. ನಾನು ಹಾಗೆಯೇ ಮಾಡಿದೆ. ಮೊದಲು ಸೀಮೆಎಣ್ಣೆ ಸುರಿದುಕೊಳ್ಳಲು ಸೂಚಿಸಿತು. ನಂತರ ಬೆಂಕಿಪಟ್ಟಣ ಎತ್ತಿಕೊಂಡು ಬೆಂಕಿ ಹಚ್ಚಿಕೊಳ್ಳಲು ಹೇಳಿತು. ನಾನು ದೆವ್ವ ಹೇಳಿದಂತೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಮಹಿಳೆ ಹೇಳಿಕೆ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಸ್ಥಳದಲ್ಲಿ ಅಪರಿಚಿತ ದೆವ್ವ ಎಂದು ನಮೂದಿಸಿದ್ದಾರೆ. ಆದರೆ ಮಹಿಳೆಯ ಪೋಷಕರು ಬೇರೆಯದ್ದೇ ಆರೋಪ ಮಾಡಿದ್ದಾರೆ. ತಮ್ಮ ಮಗಳಿಗೆ ಗಂಡನ ಮನೆಯವರು ಕಾಟ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ನಂತರ ದೆವ್ವದ ಕಾಟ ಎಂದು ಹೇಳಿಕೆ ನೀಡಲು ಮಗಳಿಗೆ ಗಂಡನ ಮನೆಯವರು ಒತ್ತಡ ಹೇರಿದ್ದಾರೆ. ಅದಕ್ಕೆ ಈ ದೆವ್ವದ ಕಥೆ ಹೇಳಿದ್ದಾಳೆ ಎಂದು ಆರೋಪಿಸಿದ್ದಾರೆ. ಆದರೆ ಮಹಿಳೆ ಹೇಳಿಕೆಯಲ್ಲಿ ತನ್ನ ಗಂಡನ ಮನೆಯವರ ಮೇಲೆ ಯಾವುದೇ ಆರೋಪ ಮಾಡಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ