25 ಬಾಲಕಿಯರನ್ನು ರಕ್ಷಿಸಿದ ಪ್ರಯಾಣಿಕನ ಆ ಒಂದು ಟ್ವೀಟ್..!

ಹೊಸದಿಲ್ಲಿ: ಪ್ರಜ್ಞಾವಂತ ಪ್ರಯಾಣಿಕನ ಒಂದು ಟ್ವೀಟ್ 25 ಬಾಲಕಿಯನ್ನು ರಕ್ಷಿಸಿದೆ. ಒಂದು ಟ್ವೀಟ್ ನಿಂದ ಕೆಲವೇ ನಿಮಿಷಗಳಲ್ಲಿ ಅಲರ್ಟ್ ಆದ ಪೊಲೀಸರು ಸಿನೀಮಿಯ ಮಾದರಿಯಲ್ಲಿ ಸಂಕಷ್ಟದಲ್ಲಿದ್ದ ಬಾಲಕಿಯರನ್ನು ರಕ್ಷಿಸಿದ್ದಾರೆ.
ಜು.5ರಂದು ರೈಲು ಏರಿದ ಆದರ್ಶ ಶ್ರೀವಾತ್ಸವ್ ಎಂಬುವವರು ಬೋಗಿಯಲ್ಲಿದ್ದ ಬಾಲಕಿಯರನ್ನು ಗಮನಿಸಿದ್ದಾರೆ. 25 ಬಾಲಕಿಯರಲ್ಲಿ ಕೆಲವರು ಅಳುತ್ತಿದ್ದರೆ, ಇನ್ನು ಕೆಲವರು ದುಗುಡದಿಂದ ಕುಳಿತಿರುವುದು ಆದರ್ಶ್ ಗೆ ಅನುಮಾನಾಸ್ಪದವಾಗಿ ಕಂಡಿದೆ. ಅಪ್ರಾಪ್ತ ಹೆಣ್ಣು ಮಕ್ಕಳು ಯಾವುದೋ ಸಂಕಷ್ಟದಲ್ಲಿರುವುದು ಅರಿವಾಗಿದೆ. ತಕ್ಷಣಕ್ಕೆ ಏನು ಮಾಡಬೇಕೆಂದು ತೋಚದ ಆದರ್ಶ್ ಗೆ ಕೈಯಲ್ಲಿದ್ದ ಮೊಬೈಲ್ ದಾರಿ ತೋರಿಸಿದೆ.
ಕೂಡಲೇ ತಮ್ಮ ಟ್ವಿಟರ್ ಖಾತೆ ಮೂಲಕ ತಾನು ಪ್ರಯಾಣಿಸುತ್ತಿರುವ ರೈಲಿನ ವಿವರ, ಬಾಲಕಿಯರ ಅನುಮಾನಾಸ್ಪದ ಪರಿಸ್ಥಿತಿಯ ಬಗ್ಗೆ ಬರೆದಿದ್ದಾರೆ. ನಾನು ಮುಜಾಫರ್ಪುರ -ಬಾಂದ್ರಾ ಔದ್ ಎಕ್ಸ್ ಪ್ರೆಸ್ ರೈಲಿನ ಎಸ್5 ಕೋಚ್ ನಲ್ಲಿ ಪ್ರಯಾಣಿಸುತ್ತಿದ್ದೇನೆ. ನಾನು ಪ್ರಯಾಣಿಸುತ್ತಿರುವ ಬೋಗಿಯಲ್ಲಿ ಸುಮಾರು 25 ಬಾಲಕಿಯರಿದ್ದು, ಅವರೆಲ್ಲಾ ಅಳುತ್ತಿದ್ದಾರೆ, ಅಭದ್ರತೆಯಲ್ಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಅದನ್ನು ರೈಲ್ವೆ ಮಿನಿಸ್ಟರ್ ಪಿಯೂಷ್ ಗೋಯಲ್, ಪ್ರಧಾನಿ ಮೋದಿ, ಟೆಲಿಕಾಮ್ ಸಚಿವ ಮನೋಜ್ ಸಿನ್ಹಾ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಟ್ವಿಟ್ಟರ್ ಖಾತೆಗೆ ಟ್ಯಾಗ್ ಮಾಡಿದ್ದಾರೆ.
ಟ್ವೀಟ್ ಮಾಡಿದ ಕೂಡಲೆ ವಾರಣಾಸಿ, ಲಖನೌ ಅಧಿಕಾರಿಗಳು , ರೈಲ್ವೆ ಪೊಲೀಸರು ಹಾಗೂ ರೈಲ್ವೆ ರಕ್ಷಣಾ ದಳ ಬಾಲಕಿಯರ ರಕ್ಷಣೆಗೆ ಧಾವಿಸಿದೆ. ಗೋರಖ್ ಪುರದ ಬಳಿ ಬಾಲಕಿಯರನ್ನು ರಕ್ಷಿಸಿದ್ದಾರೆ. ಬಾಲಕಿಯರನ್ನು ಮಾನವಕಳ್ಳಸಾಗಾಣೆ ಮಾಡಲಾಗುತ್ತಿತ್ತು ಎಂಬುವುದು ಬಯಲಾಗಿದೆ. ಟ್ವೀಟ್ ಮೂಲಕ ಬಾಲಕಿಯಯರನ್ನು ರಕ್ಷಿಸಿ ಪ್ರಯಾಣಿಕ ಆದರ್ಶ್ ಆದರ್ಶ ಮೆರೆದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ