ಭಾರತ, ಇಂಗ್ಲೆಂಡ್ ಮೊದಲ ಟಿ20: ಒಂದೇ ಪಂದ್ಯದಲ್ಲಿ 7 ದಾಖಲೆ ನಿರ್ಮಾಣ!

ಮ್ಯಾಂಚೆಸ್ಟರ್: ಇಂಗ್ಲೆಂಡ್ ಪ್ರವಾಸದ ತನ್ನ ಮೊದಲ ಪಂದ್ಯದಲ್ಲೇ ವಿರಾಟ್ ಕೊಹ್ಲಿ ಪಡೆ ತನ್ನ ತಾಕತ್ತು ಪ್ರದರ್ಶನ ಮಾಡಿದ್ದು, ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ 8 ವಿಕೆಟ್ ಗಳ ಜಯ ಸಾಧಿಸಿದೆ.
ಪ್ರಮುಖವಾಗಿ ಕುಲದೀಪ್ ಯಾದವ್ ಸ್ಪಿನ್ ಮ್ಯಾಜಿಕ್ ಮತ್ತು ಕೆಎಲ್ ರಾಹುಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದ ಭಾರತ ತಂಡದ ಆಂಗ್ಲರನ್ನು ಮಣಿಸಿದ್ದು, ಈ ಪಂದ್ಯದಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿವೆ. ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಸ್ಪಿನ್ ಸೆನ್ಷೇಷನ್ ಕುಲದೀಪ್ ಯಾದವ್ ರಿಂದ ಹಲವು ದಾಖಲೆಗಳ ನಿರ್ಮಾಣವಾಗಿದೆ.
ನಿನ್ನೆ ನಡೆದ ಕೇವಲ ಒಂದು ಪಂದ್ಯದಲ್ಲಿ 7 ದಾಖಲೆ ನಿರ್ಮಾಣವಾಗಿವೆ ಎಂದರೆ ಅಚ್ಚರಿಯಾಗಬಹುದು. ಈ ದಾಖಲೆಗಳ ಪಟ್ಟಿ ಇಲ್ಲಿದೆ.
ಕ್ರಿಕೆಟ್ ಅಂಕಿಅಂಶಗಳ ಪ್ರಕಾರ ತಿಳಿದುಬಂದಿರುವ ದಾಖಲೆಗಳು ಇಂತಿವೆ.
1.ಕುಲದೀಪ್ ಯಾದವ್
ಭಾರತದ ಸ್ಪಿನ್ ಸೆನ್ಷೇಷನ್ ಕುಲದೀಪ್ ಯಾದವ್ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ದಾಖಲೆಯೊಂದನ್ನು ಬರೆದಿದ್ದು, ಈ ಮೈದಾನದಲ್ಲಿ ಕುಲದೀಪ್ 24 ರನ್ ಗಳಿಗೆ 5 ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದಾರೆ. ರಿಸ್ಟ್ ಸ್ಪಿನ್ನರ್ ಒಬ್ಬರ ಉತ್ಯುತ್ತಮ ಪ್ರದರ್ಶನ ಇದಾಗಿದ್ದು, ಅಂತೆಯೇ ಟಿ20 ಪಂದ್ಯವೊಂದರಲ್ಲಿ ರಿಸ್ಚ್ ಸ್ಪಿನ್ನರ್ ಒಬ್ಬರು ಐದು ವಿಕೆಟ್ ಪಡೆದ ಮೊದಲ ನಿದರ್ಶನ ಇದಾಗಿದೆ.
2. ವಿರಾಟ್ ಕೊಹ್ಲಿ
ಇಂಗ್ಲೆಂಡ್ ವಿರುದ್ಧ 20 ರನ್ ಸಿಡಿಸಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ರನ್  ಗಳ ನೆರವಿನ ಮೂಲಕ ಟಿ20ಯಲ್ಲಿ 2000 ರನ್ ಪೂರೈಸಿದರು. ಒಟ್ಟು 56 ಇನ್ನಿಂಗ್ಸ್ ಗಳಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದು, ಭಾರತದ ಪರ ವೇಗವಾಗಿ 2000ರನ್ ಪೂರೈಸಿದ ಕ್ರಿಕೆಟಿಗ ಎಂಬ ಕೀರ್ತಿಗೂ ಕೊಹ್ಲಿ ಪಾತ್ರರಾದರು.
3.ವಿರಾಟ್ ಕೊಹ್ಲಿ
ಅಂತೆಯೇ ವಿರಾಟ್ ಕೊಹ್ಲಿ 2000 ರನ್ ಪೂರೈಸಿದ ನಾಲ್ಕನೇ ಆಟಗಾರ ಎಂಬ ಕೀರ್ತಿಗೂ ಭಾಜನರಾದರು.
4.ಕೆಎಲ್ ರಾಹುಲ್
ಇಂಗ್ಲೆಂಡ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ಶತಕ ಸಿಡಿಸಿದ ರಾಹುಲ್ ತಮ್ಮ ವೃತ್ತಿ ಜೀವನದ 2ನೇ ಟಿ20 ಶತಕ ಸಿಡಿಸಿದರು. ಇದಕ್ಕೂ ಮೊದಲು ರಾಹುಲ್ ಜಿಂಬಾಬ್ವೆ ವಿರುದ್ಧ ತಮ್ಮ ಮೊದಲ ಶತಕ ಸಿಡಿಸಿದ್ದರು.
5.ಐದು ವಿಕೆಟ್ ಗೊಂಚಲು ಪಡೆದ ಬೌಲರ್ ಗಳ ಪಟ್ಟಿಯಲ್ಲಿ ಭಾರತಕ್ಕೆ ಅಗ್ರಸ್ಥಾನ
ಇನ್ನು ಟಿ20 ಮಾದರಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಬಾರಿ ಐದು ವಿಕೆಟ್ ಗಳ ಗೊಂಚಲು ಪಡೆದ ಬೌಲರ್ ಗಳ ಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ಕುಲದೀಪ್ ಯಾದವ್ 24 ರನ್ ನೀಡಿ ಐದು ವಿಕೆಟ್ ಪಡೆದಿದ್ದರು. ಈ ಹಿಂದೆ 2017ರಲ್ಲಿ ಬೆಂಗಳೂರಿನಲ್ಲಿ ಇದೇ ಇಂಗ್ಲೆಂಡ್ ವಿರುದ್ಧ ಚಾಹಲ್ 25 ರನ್ ನೀಡಿ 6 ವಿಕೆಟ್ ಮತ್ತು 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 2018ರಲ್ಲಿ ಭುವನೇಶ್ವರ್ ಕುಮಾರ್ 24 ರನ್ ನೀಡಿ 5 ವಿಕೆಟ್ ಗಳಿಸಿದ್ದು, ಈ ಹಿಂದಿನ ಉತ್ತಮ ದಾಖಲೆಯಾಗಿತ್ತು.
6.ಸ್ಟಂಪಿಂಗ್ ಮೂಲಕ ಇಬ್ಬರು ಬ್ಯಾಟ್ಸಮನ್ ಗಳ ಶೂನ್ಯಕ್ಕೇ ಔಟ್ ಮಾಡಿದ ಮೊದಲ ಬೌಲರ್ ಕುಲದೀಪ್ ಯಾದವ್
ಇನ್ನು ಪಂದ್ಯದ 14ನೇ ಓವರ್ ನಲ್ಲಿ ಭಾರತ ತಂಡದ ಕುಲದೀಪ್ ಯಾದವ್ ಇಂಗ್ಲೆಂಡ್ ನ ಇಬ್ಬರು ಘಟಾನುಘಟಿ ಬ್ಯಾಟ್ಸಮನ್ ಗಳು ಸ್ಚಂಪಿಂಗ್ ಮೂಲಕ ಔಟ್ ಮಾಡಿದರು. ಇಂಗ್ಲೆಂಡ್ ಬೇರ್ ಸ್ಚೋವ್ ರನ್ನು ಸ್ಟಂಪಿಂಗ್ ಬಲೆಗೆ ಕೆಡವಿದ ಕುಲದೀಪ್ ಅದರ ನಂತರದ ಎಸೆತದಲ್ಲೇ ಮತ್ತೋರ್ವ ದಾಂಡಿಗ ಜೋ ರೂಟ್ ರನ್ನೂ ಅದೇ ಧಾಟಿಯಲ್ಲೇ ಪೆವಿಲಿಯನ್ ಗೆ ಅಟ್ಟಿದರು. ಟಿ20 ಮಾದರಿ ಕ್ರಿಕೆಟ್ ನಲ್ಲಿ ಈ ಹೀಗೆ 2 ಎಸೆತದಲ್ಲಿ ಇಬ್ಬರು ಬ್ಯಾಟ್ಸಮನ್ ಗಳನ್ನು ಸ್ಟಂಪಿಂಗ್ ಮೂಲಕ ಔಟ್ ಮಾಡಿದ್ದು ಇದೇ ಮೋದಲು.
7.ಮಹೇಂದ್ರ ಸಿಂಗ್ ಧೋನಿ ದಾಖಲೆ ಸ್ಟಂಪಿಂಗ್
ಟೀಂ ಇಂಡಿಯಾ ಕಂಡ ಅತ್ಯಂತ ಯಶಸ್ವೀ ನಾಯಕ ಮತ್ತು ಅತ್ಯಂತ ಯಶಸ್ವೀ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಕೂಡ ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ದಾಖಲೆ ಬರೆದರು. ಧೋನಿಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಗಲಿಲ್ಲವಾದರೂ, ಫೀಲ್ಡಿಂಗ್ ವೇಳೆ ಇಂಗ್ಲೆಂಡ್ ಇಬ್ಹರು ಬ್ಯಾಟ್ಸಮನ್ ಗಳು ಸ್ಟಂಪ್ ಔಟ್ ಮಾಡುವ ಮೂಲಕ ಟಿ20ಯಲ್ಲಿ ತಮ್ಮ ಸ್ಟಂಪಿಂಗ್ ಪ್ರಮಾಣವನ್ನು 33ಕ್ಕೆ ಏರಿಕೆ ಮಾಡಿಕೊಂಡರು. ಆ ಮೂಲಕ ಟಿ20ಯಲ್ಲಿ ಅತೀ ಹೆಚ್ಚು ಸ್ಟಂಪ್ ಔಟ್ ಮಾಡಿದ ಮೊದಲ ವಿಕೆಟ್ ಕೀಪರ್ ಎಂಬ ದಾಖಲೆಯನ್ನು ಧೋನಿ ನಿರ್ಮಿಸಿದರು. ಈ ಹಿಂದೆ ಪಾಕಿಸ್ತಾನದ ವಿಕೆಟ್ ಕೀಪರ್ ಕಮ್ರಾನ್ ಅಕ್ಮಲ್ ಹೆಸರಲ್ಲಿದ್ದ ದಾಖಲೆಯನ್ನು ಮುರಿದು ತಮ್ಮ ಹೆಸರಲ್ಲಿ ನೂತನ ದಾಖಲೆ ಬರೆದುಕೊಂಡರು. ಅಕ್ಮಲ್ ಟಿ20ಯಲ್ಲಿ 32 ಸ್ಟಂಪಿಂಗ್ ಮಾಡಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ