ವಿಧಾನಪರಿಷತ್ ಸಭಾಪತಿ ಸ್ಥಾನಕ್ಕಾಗಿ ಕಾಂಗ್ರೆಸ್-ಜೆಡಿಎಸ್ ನಡುವೆ ತೀವ್ರ ಪೈಪೆÇೀಟಿ

 

ಬೆಂಗಳೂರು, ಜು.4- ರಾಜ್ಯ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕಾಗಿ ಕಾಂಗ್ರೆಸ್-ಜೆಡಿಎಸ್ ನಡುವೆ ತೀವ್ರ ಪೈಪೆÇೀಟಿ ಮುಂದುವರೆದಿದೆ.
ನಮ್ಮ ಪಕ್ಷಕ್ಕೆ ಸಭಾಪತಿ ಸ್ಥಾನ ಬಿಟ್ಟುಕೊಡಬೇಕೆಂದು ಜೆಡಿಎಸ್ ಪಕ್ಷದ ಮಹಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್‍ಆಲಿ, ಸಮನ್ವಯ ಸಮಿತಿ ಅಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರವಾಣಿ ಮೂಲಕ ಮಾಡಿದ ಮನವಿಗೆ ಸಿದ್ದರಾಮಯ್ಯನವರು ನಕಾರ ವ್ಯಕ್ತಪಡಿಸಿದ್ದಾರೆ.
ಡ್ಯಾನಿಶ್‍ಆಲಿ ಅವರು ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿ, ಬವರಾಜಹೊರಟ್ಟಿ ಅವರು ನಿಮ್ಮ ಸ್ನೇಹಿತರು. ಅವರಿಗೆ ಸಭಾಪತಿ ಸ್ಥಾನ ಬಿಟ್ಟುಕೊಡಿ ಎಂದು ಮಾಡಿದ ಮನವಿಯನ್ನು ನಯವಾಗಿಯೇ ತಿರಸ್ಕರಿಸಿರುವ ಸಿದ್ದರಾಮಯ್ಯನವರು, ಹೊರಟ್ಟಿ ಅವರು ನನ್ನ ಆಪ್ತ ಸ್ನೇಹಿತರು. ನೀವು ಅವರನ್ನು ಸಚಿವರನ್ನಾಗಿ ಮಾಡಿ. ನಮ್ಮ ಕಡೆಯಿಂದ ಯಾವುದೇ ತಕರಾರು ಇಲ್ಲ ಎಂದು ತಿರುಗೇಟು ನೀಡಿದ್ದಾರೆ. ಸಭಾಪತಿ ಸ್ಥಾನ ಕಾಂಗ್ರೆಸ್‍ಗೇ ನೀಡಬೇಕು ಎಂಬುದನ್ನು ಈ ಮೂಲಕ ಸೂಚ್ಯವಾಗಿ ಹೇಳಿದ್ದಾರೆ.

ಪ್ರಸ್ತುತ ಪರಿಷತ್‍ನಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ ಹೆಚ್ಚಾಗಿದೆ. 34 ಸದಸ್ಯ ಬಲ ಹೊಂದಿರುವ ಪರಿಷತ್‍ನಲ್ಲಿ ಸಹಜವಾಗಿಯೇ ಸಭಾಪತಿ ಸ್ಥಾನ ದೊರೆಯಲಿದೆ ಎಂಬ ಲೆಕ್ಕಾಚಾರ ಕಾಂಗ್ರೆಸ್‍ನ್ನದ್ದಾಗಿದ್ದು, ಸಿದ್ದರಾಮಯ್ಯನವರು ಈ ಸ್ಥಾನ ನಮ್ಮ ಪಕ್ಷಕ್ಕೆ ಸಿಗಬೇಕು. ಅದರಲ್ಲೂ ಹಿರಿಯ ಸದಸ್ಯರಾದ ಎಸ್.ಆರ್.ಪಾಟೀಲ್ ಅವರನ್ನು ಸಭಾಪತಿಯನ್ನಾಗಿ ಮಾಡಬೇಕು ಎಂಬ ನಿಲುವು ಹೊಂದಿದ್ದು, ಪಕ್ಷದ ಹೈಕಮಾಂಡ್ ಕೂಡ ಸಹಮತ ಸೂಚಿಸಿದೆ.
ಸಚಿವ ಸಂಪುಟದಲ್ಲಿ ಸ್ಥಾನ ವಂಚಿತರಾಗಿರುವ ಹಿರಿಯ ಸದಸ್ಯ ಎಸ್.ಆರ್.ಪಾಟೀಲ್ ಅವರನ್ನು ಸಭಾಪತಿಯನ್ನಾಗಿ ಮಾಡಿ ಬಾದಾಮಿ ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಕಾರಣರಾದ ಅವರ ಋಣ ತೀರಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ನಿನ್ನೆ ಸಿದ್ದರಾಮಯ್ಯನವರು, ಶಾಸಕರು ಮತ್ತು ಪರಿಷತ್ ಸದಸ್ಯರಿಗೆ ಏರ್ಪಡಿಸಿದ್ದ ಔತಣಕೂಟದಲ್ಲಿ ಎಸ್.ಆರ್.ಪಾಟೀಲ್ ಅವರೊಂದಿಗೆ ಈ ಸಂಬಂಧ ಚರ್ಚೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ.

ಈ ಅಧಿವೇಶನದಲ್ಲಿ ಸಭಾಪತಿ ಸ್ಥಾನದ ಆಯ್ಕೆ ಆಗಬೇಕು. ಆದರೆ, ಕಾಂಗ್ರೆಸ್-ಜೆಡಿಎಸ್ ನಡುವಿನ ಹಗ್ಗಜಗ್ಗಾಟ ಮುಂದುವರೆದಿರುವುದರಿಂದ ಸಭಾಪತಿ ಸ್ಥಾನದ ಆಯ್ಕೆ ಆಗುತ್ತದೆಯೋ ಇಲ್ಲವೋ ಅಥವಾ ಹಂಗಾಮಿ ಸ್ಪೀಕರ್ ಅವರೇ ಮುಂದುವರೆಯಲಿದ್ದಾರೆಯೋ ಎಂಬ ಅನುಮಾನ ಕಾಡ ತೊಡಗಿದೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಇರುವುದರಿಂದ ವಿಧಾನಸಭೆಯಲ್ಲಿ ಸಭಾಧ್ಯಕ್ಷ ಸ್ಥಾನ ಕಾಂಗ್ರೆಸ್‍ಗೆ, ಉಪಸಭಾಧ್ಯಕ್ಷ ಸ್ಥಾನ ಜೆಡಿಎಸ್‍ಗೆ. ಅದೇ ರೀತಿ ವಿಧಾನಪರಿಷತ್‍ನಲ್ಲಿ ಸಭಾಪತಿ ಸ್ಥಾನ ಜೆಡಿಎಸ್‍ಗೆ ಹಾಗೂ ಉಪಸಭಾಪತಿ ಸ್ಥಾನ ಕಾಂಗ್ರೆಸ್‍ಗೆ ಎಂಬ ಮಾತಾಗಿತ್ತು. ಅದರಂತೆ ಹೊರಟ್ಟಿ ಅವರನ್ನು ಹಂಗಾಮಿ ಸಭಾಪತಿಯನ್ನಾಗಿ ನೇಮಿಸಲಾಗಿತ್ತು. ಈಗ ಈ ರೀತಿಯ ಬೆಳೆವಣಿಗೆಗಳು ನಡೆಯುತ್ತಿವೆ. ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ