ಸಿದ್ದರಾಮಯ್ಯ ಅವರು ಕರೆದಿದ್ದ ಔತಣಕೂಟಕ್ಕೆ ಕಾಂಗ್ರೆಸ್‍ನ ಪ್ರಭಾವಿ ನಾಯಕರು ಗೈರು; ಪ್ರತ್ಯೇಕ ಗುಂಪಿನ ಮುನ್ಸೂಚನೆ

 

ಬೆಂಗಳೂರು, ಜೂ.27- ಸಮ್ಮಿಶ್ರ ಸರ್ಕಾರದಲ್ಲಿ ತಮ್ಮಿಂದ ಉಂಟಾಗಿದ್ದ ಗೊಂದಲಗಳನ್ನು ಬಗೆ ಹರಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆದಿದ್ದ ಔತಣಕೂಟಕ್ಕೆ ಕಾಂಗ್ರೆಸ್‍ನ ಪ್ರಭಾವಿ ನಾಯಕರು ಗೈರು ಹಾಜರಾಗುವ ಮೂಲಕ ಪ್ರತ್ಯೇಕ ಗುಂಪಿನ ಮುನ್ಸೂಚನೆ ನೀಡಿದ್ದಾರೆ.
ನಿನ್ನೆ ರಾತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕರಿಗೆ ಔತಣಕೂಟ ಆಯೋಜಿಸಿದ್ದರು. ಅದರಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್, ಪ್ರಿಯಾಂಕ್ ಖರ್ಗೆ, ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಎಂ.ಬಿ.ಪಾಟೀಲ್, ಕೆಪಿಸಿಸಿ ಕಾರ್ಯಧ್ಯಕ್ಷ ದಿನೇಶ್ ಗುಂಡುರಾವ್ ಸೇರಿದಂತೆ ಬಹುತೇಕ ಶಾಸಕರು ಭಾಗವಹಿಸಿದ್ದರು.

ಆದರೆ ಕಾಂಗ್ರೆಸ್ ವಲಯದಲ್ಲಿ ಪ್ರಭಾವಿಯಾಗಿರುವ ಎಚ್.ಕೆ.ಪಾಟೀಲ್, ರೋಷನ್‍ಬೇಗ್, ರಾಮಲಿಂಗಾ ರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ಸೇರಿದಂತೆ ಬಹುತೇಕ ಪ್ರಮುಖರು ಗೈರು ಹಾಜರಾಗಿದ್ದರು.
ಹಜ್ ಸಮಿತಿಯ ಅಧ್ಯಕ್ಷರಾಗಿರುವ ಹಿರಿಯ ಶಾಸಕ ರೋಷನ್ ಬೇಗ್ ಸಚಿವ ಜಮೀರ್ ಅಹಮದ್ ಖಾನ್ ಕೈ ಕೆಳಗೆ ಕೆಲಸ ಮಾಡುವ ಸ್ಥಿತಿಯಿದೆ. ಅದರಿಂದ ಮುಜುಗರಕ್ಕೆ ಒಳಗಾಗಿರುವ ರೋಷನ್ ಬೇಗ್ ಹಜ್ ಮತ್ತು ವಕ್ಷ್ ಖಾತೆಯನ್ನು ಜಮೀರ್ ಬದಲಿಗೆ ಬೇರೆ ಯಾರಿಗಾದರೂ ಕೊಡಿಸಿ, ಅವರ ಜೊತೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸಿದ್ದರಾಮಯ್ಯ, ಪರಮೇಶ್ವರ್ ಸೇರಿದಂತೆ ಹಲವು ಹಿರಿಯ ನಾಯಕರ ಬಳಿ ಅವಲತ್ತುಕೊಂಡಿದ್ದರು. ಆದರೆ ಅದಕ್ಕೆ ಯಾರು ಸೊಪ್ಪು ಹಾಕಿಲ್ಲ. ಹೀಗಾಗಿ ಅಸಮಾಧಾನ ಗೊಂಡಿರುವ ರೋಷನ್ ಬೇಗ್ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ, ಹಾಗೇಯೇ ನಿನ್ನೆ ಸಿದ್ದರಾಮಯ್ಯ ಅವರು ಕರೆದಿದ್ದ ಔತಣಕೂಟದಲ್ಲೂ ಭಾಗವಹಿಸಿದೆ ಅಸಮಾಧಾನ ಹೊರ ಹಾಕಿದ್ದಾರೆ.

ಇನ್ನೂ ಎಚ್.ಕೆ.ಪಾಟೀಲ್, ಎಸ್.ಆರ್.ಪಾಟೀಲ್ ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿದ್ದಕ್ಕಾಗಿ ಮತ್ತು ತಮ್ಮ ಜಿಲ್ಲೆಗಳಲ್ಲಿ ತಮ್ಮ ಮಾತನ್ನು ಮೀರಿ ಕೆಲ ನಾಯಕರಿಗೆ ರಾಜ್ಯ ಮತ್ತು ಕೇಂದ್ರದ ವರಿಷ್ಠರು ಮಣೆ ಹಾಕುತ್ತಿರುವುದಕ್ಕೆ ಅಸಮಾಧಾನ ಗೊಂಡಿದ್ದಾರೆ.
ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ತಂಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತರ ಬಳಿ ಸಮ್ಮಿಶ್ರ ಸರ್ಕಾರ ಹಾಗೂ ಹೊಸ ಬಜೆಟ್ ಬಗ್ಗೆ ಅಪಸ್ವರ ತೆಗೆದಿದ್ದರು. ಅದು ಭಾರೀ ಸಂಚಲನವನ್ನೇ ಮೂಡಿಸಿತ್ತು. ಸಿದ್ದರಾಮಯ್ಯ ಅವರ ನಿಲುವುಗಳು ಕಾಂಗ್ರೆಸ್ ಶಾಸಕರನ್ನು ಗೊಂದಲಕ್ಕೀಡು ಮಾಡಿದ್ದವು. ಇದನ್ನು ಬಗೆ ಹರಿಸದೆ ಇದ್ದರೆ ಪ್ರಸ್ತತ ನಡೆಯುತ್ತಿರುವ ಅಧಿವೇಶನದಲ್ಲಿ ಪ್ರತಿಪಕ್ಷವನ್ನು ಎದುರಿಸುವುದು ಕಷ್ಟವಾಗಲಿದೆ ಎಂಬ ಪರಿಸ್ಥಿತಿ ಇತ್ತು.
ನಾನು ಹೇಳಿಕೆ ನೀಡಿದ ಸಂದರ್ಭವೇ ಬೇರೆ, ನನ್ನ ಮಾತುಗಳ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳದೆ ಆಯ್ದ ಭಾಗವನ್ನಷ್ಟೇ ಬಹಿರಂಗ ಪಡಿಸಿ ಅಪಾರ್ಥ ಕಲ್ಪಿಸಲಾಗಿದೆ ಎಂದು ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದ್ದರು ಅದು ಪರಿಣಾಮಕಾರಿಯಾಗಿರಲಿಲ್ಲ. ಕೆಲ ಶಾಸಕರು ಗೊಂದಲದಲ್ಲೇ ಇದ್ದರು. ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾಡಿರುವ ಭಾಷಣದ ಮೇಲೆ ವಂದನೆ ಸಲ್ಲಿಸುವ ಚರ್ಚೆಯಲ್ಲಿ ಭಾಗವಹಿಸಲು ಕಾಂಗ್ರೆಸ್ ಶಾಸಕರು ಹಿಂದೇಟು ಹಾಕಿದ್ದರು. ಪರಿಸ್ಥಿತಿಯನ್ನು ತಿಳಿಗೊಳಿಸಲು ಎಲ್ಲರನ್ನೂ ಔತಣಕೂಟಕ್ಕೆ ಆಹ್ವಾನಿಸಿದ್ದರು. ಅದರಲ್ಲಿ ಬಹುತೇಕ ಎಲ್ಲರೂ ಭಾಗವಹಿಸಿದ್ದರಾದರೂ ಪ್ರಮುಖ ಶಾಸಕರು ಹೊರಗುಳಿಯುವ ಮೂಲಕ ಪಕ್ಷದಲ್ಲಿ ಮತ್ತೊಂದು ಗುಂಪು ಸೃಷ್ಠಿಯಾಗುವ ಸಾಧ್ಯತೆಯಿದೆ.

ಎಚ್.ಕೆ.ಪಾಟೀಲ್ ಈಗಾಗಲೇ ಉತ್ತರ ಕರ್ನಾಟಕ ಭಾಗದ ಕೆಲ ಶಾಸಕರನ್ನು ಒಗ್ಗೂಡಿಸುವ ಪಯತ್ನ ನಡೆಸಿದ್ದಾರೆ. ಇನ್ನೂ ಬೆಂಗಳೂರಿನಲ್ಲಿ ಪ್ರಭಾವಿ ಶಾಸಕ ರಾಗಿರುವ ರಾಮಲಿಂಗಾ ರೆಡ್ಡಿ ಮತ್ತು ರೋಷನ್ ಬೇಗ್ ಅವರು ಸಚಿವ ಸ್ಥಾನ ಸಿಗದಿದ್ದಕ್ಕಾಗಿ ಅಸಮಾಧಾನಗೊಂಡಿದ್ದಾರೆ. ಈಗ ಪ್ರತ್ಯೇಕವಾಗಿ ಗುರುತಿಸಿಕೊಳ್ಳಲಾರಂಭಿಸಿದ್ದಾರೆ.
ಕಾಂಗ್ರೆಸ್‍ನಲ್ಲಿ ಈಗಾಗಲೇ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಗುಂಪುಗಳು ಸಕ್ರಿಯವಾಗಿವೆ. ಇತ್ತೀಚೆಗೆ ಸಚಿವ ಸ್ಥಾನ ಸಿಗದ ಕಾರಣಕ್ಕೆ ಎಂ.ಬಿ.ಪಾಟೀಲ್ ಮತ್ತು ಸತೀಶ್ ಜಾರಕಿಹೊಳಿ ಗುಂಪುಗಾರಿಕೆ ಮಾಡಲು ಮುಂದಾದರಾದರೂ ಹೈಕಮಾಂಡ್ ಅದಕ್ಕೆ ಬ್ರೆಕ್ ಹಾಕಿತ್ತು. ಅದರ ಬೆನ್ನಲ್ಲೆ ಸದ್ದುಗದ್ದಲವಿಲ್ಲದೆ ಪ್ರಭಾವಿ ಶಾಸಕರು ತಮ್ಮ ಗುಂಪನ್ನು ಬಲ ಪಡಿಸುವ ಪ್ರಯತ್ನ ನಡೆಸಿದ್ದಾರೆ.
ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವಿನ ಗೊಂದಲಗಳೆ ಹಾಸಿ ಹೊದ್ದುಕೊಳ್ಳವಷ್ಟಿರುವಾಗ ಕಾಂಗ್ರೆಸ್‍ನಲ್ಲಿನ ಪ್ರತ್ಯೇಕ ಗುಂಪುಗಾರಿಕೆಗಳು ಮತ್ತಷ್ಟು ತಲೆ ನೋವಾಗುವ ಸಾಧ್ಯತೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ