15 ನಿಮಿಷದಲ್ಲಿ ಹಾಜರಿರಬೇಕಾದ ಸಚಿವರನ್ನು ಕರೆಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸಭಾಧ್ಯಕ್ಷರು.

 

ಬೆಂಗಳೂರು, ಜು.4- ವಿಧಾನಸಭೆಯಲ್ಲಿ ಸಚಿವರ ಹಾಜರಾತಿ ಕೊರತೆಯನ್ನು ಕಂಡು ಗರಂ ಆದ ಸಭಾಧ್ಯಕ್ಷ ರಮೇಶ್‍ಕುಮಾರ್ ಅವರು 15 ನಿಮಿಷದಲ್ಲಿ ಹಾಜರಿರಬೇಕಾದ ಸಚಿವರನ್ನು ಕರೆಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವ ಕುರಿತು ಆಡಳಿತ ಪಕ್ಷದ ಬಿ.ಸಿ.ಪಾಟೀಲ್ ಮಾತನಾಡುತ್ತಿದ್ದಾಗ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷರು, ಸರ್ಕಾರದಿಂದ ನಮಗೆ ನೀಡಿರುವ ಪಟ್ಟಿ ಪ್ರಕಾರ ಸದನದಲ್ಲಿ 13 ಮಂದಿ ಸಚಿವರು ಕಡ್ಡಾಯವಾಗಿ ಹಾಜರಿರಬೇಕಿತ್ತು. ಆದರೆ, ಆರು ಮಂದಿ ಸಚಿವರು ಮಾತ್ರ ಇದ್ದೀರಿ. ಉಳಿದ ಏಳು ಮಂದಿ ಸಚಿವರು ಬಂದಿಲ್ಲ ಎಂದು ಆಸಮಾಧಾನ ವ್ಯಕ್ತಪಡಿಸಿದರು.

ಸದನದಲ್ಲಿ ಹಾಜರಿರಬೇಕಾದ ಸಚಿವರ ಪಟ್ಟಿಯನ್ನು ಉಲ್ಲೇಖಿಸಿದ ಅವರು, ಉಪಮುಖ್ಯಮಂತ್ರಿ ಪರಮೇಶ್ವರ್, ಸಚಿವರಾದ ಎಚ್.ಡಿ.ರೇವಣ್ಣ, ಬಂಡೆಪ್ಪಕಾಶಂಪುರ್, ಡಿ.ಕೆ.ಶಿವಕುಮಾರ್, ಎಂ.ಸಿ.ಮನಗೂಳಿ, ರಮೇಶ್‍ಜಾರಕಿಹೊಳಿ, ಪ್ರಿಯಾಂಕ ಖರ್ಗೆ, ವೆಂಕಟರಾವ್ ನಾಡಗೌಡ, ಯು.ಟಿ.ಖಾದರ್, ಜಮೀರ್ ಅಹಮ್ಮದ್‍ಖಾನ್, ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು ಸೇರಿದಂತೆ 13 ಮಂದಿ ಹಾಜರಿರಬೇಕಿತ್ತು. ಇನ್ನು 15 ನಿಮಿಷದಲ್ಲಿ ಸದನಕ್ಕೆ ಬಾರದ ಸಚಿವರನ್ನು ಕರೆಸಬೇಕು. ಇಲ್ಲದಿದ್ದರೆ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಉಪಮುಖ್ಯಮಂತ್ರಿ ಅವರಿಗೆ ಸಭಾಧ್ಯಕ್ಷರು ಎಚ್ಚರಿಕೆ ನೀಡಿದರು.
ಆಗ ಉಪಮುಖ್ಯಮಂತ್ರಿ ಪರಮೇಶ್ವರ್, ಸಚಿವರನ್ನು ಕರೆಸುವುದಾಗಿ ಹೇಳಿದರು. ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಬಿಜೆಪಿ ಶಾಸಕ ಮಾಧುಸ್ವಾಮಿ, ತುರುವೇಕೆರೆ ತಾಲ್ಲೂಕಿನಲ್ಲಿ ದೊಡ್ಡ ಕಾರ್ಯಕ್ರಮವಿದ್ದು, ಅದರಲ್ಲಿ ಭಾಗವಹಿಸಲು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೋಗಿರಬೇಕು ಎಂದು ಸಭಾಧ್ಯಕ್ಷರ ಗಮನ ಸೆಳೆದರು.

ಆಗ ಮತ್ತಷ್ಟು ಗರಂ ಆದ ಸಭಾಧ್ಯಕ್ಷರು ಕಾರ್ಯಕ್ರಮವಿದ್ದರೆ ತಮ್ಮ ಪೂರ್ವಾನುಮತಿ ಪಡೆಯಬೇಕಿತ್ತು ಎಂದರು.
ಮತ್ತೊಬ್ಬ ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ ಎದ್ದುನಿಂತು ಅಧಿಕಾರಿಗಳು, ಮಂತ್ರಿಗಳು ಇಲ್ಲವೆಂದರೆ ಸದನ ನಡೆಯುವುದಾದರೂ ಹೇಗೆ ಎಂದು ಮಾತು ಮುಂದುವರೆಸುತ್ತಿದ್ದಂತೆ ಮಧ್ಯಪ್ರವೇಶಿಸಿದ ಸ್ಪೀಕರ್, ಆ ಕಾರಣದಿಂದಲೇ ತಾವು ಉಪಮುಖ್ಯಮಂತ್ರಿಗೆ ಸೂಚನೆ ನೀಡಿರುವುದಾಗಿ ಹೇಳಿದರು.
ಬಿಜೆಪಿ ಶಾಸಕ ಪಿ.ರಾಜೀವ ಮಾತನಾಡಿ, ಅಧಿಕಾರಿಗಳ ಬಗ್ಗೆ ಸಾಫ್ಟ್ ಆಗಿದ್ದೀರಿ, ಸಚಿವರ ಬಗ್ಗೆ ಹಾರ್ಡ್ ಆಗಿದ್ದೀರಿ ಎಂದಾಗ, ಸಭಾಧ್ಯಕ್ಷರು ತಾವು ಹಾರ್ಡು ಆಲ್ಲ. ಸಾಫ್ಟೂ ಅಲ್ಲ ಎಂದರು.
ಒಬ್ಬರೇ ಅಧಿಕಾರಿ ಇದ್ದರೂ ಕೂಡ ಟಿಪ್ಪಣಿ ಮಾಡಿಕೊಂಡು ಆನಂತರ ವರ್ಗಾವಣೆ ಮಾಡಿಕೊಳ್ಳುತ್ತಾರೆ. ನಿಮಗೆ ಸಂಶಯ ಬೇಡ ಎಂದರು. ಅಲ್ಲಿಗೆ ಈ ವಿಚಾರದ ಚರ್ಚೆಗೆ ತೆರೆ ಬಿದ್ದಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ