ಮ್ಯಾಂಚೆಸ್ಟರ್: ಪ್ರಬಲ ಆಸ್ಟ್ರೇಲಿಯನ್ನರನ್ನೇ ವೈಟ್ ವಾಶ್ ಮಾಡಿ ಖಾಲಿ ಕೈಯಲ್ಲಿ ಮನೆಗೆ ಅಟ್ಟಿದ್ದ ಇಂಗ್ಲೆಂಡ್ ದಾಂಡಿಗರಿಗೆ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಮರ್ಮಾಘಾತ ನೀಡಿದ್ದಾರೆ.
ಹೌದು.. ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ತನ್ನ ಪ್ರವಾಸವನ್ನು ಭರ್ಜರಿಯಾಗಿ ಆರಂಭಿಸಿದ್ದು, ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು 5-0 ಅಂತರದಲ್ಲಿ ವೈಟ್ ವಾಶ್ ಮಾಡಿದ್ದ ಇಂಗ್ಲೆಂಡ್ ತಂಡ ಭಾರತದ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲು ಕಾಣುವ ಮೂಲಕ ತನ್ನ ವರ್ಚಸ್ಸಿಗೆ ಧಕ್ಕೆ ತಂದುಕೊಂಡಿದೆ.
ಪ್ರಮುಖವಾಗಿ ಭಾರತೀಯ ಸ್ಪಿನ್ ದಾಳಿ ಮತ್ತು ಭಾರತದ ಪ್ಪಬಲ ಬ್ಯಾಟಿಂಗ್ ಪಡೆಗೆ ಇಂಗ್ಲೆಂಡ್ ತಲೆ ಬಾಗಿದೆ. ಇಂಗ್ಲೆಂಡ್ ನೀಡಿದ್ದ 160 ರನ್ ಗಳ ಬೃಹತ್ ಮೊತ್ತದ ಹೊರತಾಗಿಯೂ ಈ ಸವಾಲನ್ನು ಭಾರತ ಯಶಸ್ವಿಯಾಗಿ ಮೆಟ್ಟಿನಿಂತಿದೆ. ಪ್ರಮುಖವಾಗಿ ಆರಂಭಿಕ ಆಘಾತದ ಬಳಿಕ ಗಮನಾರ್ಹವಾಗಿ ಭಾರತ ತಂಡ ಚೇತರಿಸಿಕೊಂಡಿದ್ದು, ನಿಜಕ್ಕೂ ಶ್ಲಾಘನೀಯ. 160 ರನ್ ಗಳ ಬೃಹತ್ ಮೊತ್ತ ಬೆನ್ನು ಹತ್ತಿದ ಭಾರತಕ್ಕೆ ಇಂಗ್ಲೆಂಡ್ ಆರಂಭಿಕ ಆಘಾತ ನೀಡಿತ್ತು. ತಂಡದ ಮೊತ್ತ ಕೇವಲ 7 ರನ್ ಗಳಾಗಿದ್ದಾಗ 4 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ಶಿಖರ್ ಧವನ್ ವಿಲ್ಲೆ ಬೌಲಿಂಗ್ ನಲ್ಲಿ ಕ್ಲೀನ್ ಬೋಲ್ಡ್ ಆದರು. ಆ ಬಳಿಕ ಉತ್ತಮವಾಗಿ ಆಡುತ್ತಿದ್ದ ರೋಹಿತ್ ಶರ್ಮಾ ಕೂಡ 32 ರನ್ ಗಳಿಸಿ ಅದಿಲ್ ರಷೀದ್ ಗೆ ವಿಕೆಟ್ ಒಪ್ಪಿಸಿದರು.
ಶಿಖರ್ ಧವನ್ ನಿರ್ಗಮನದ ಬಳಿಕ ಕ್ರೀಸ್ ಗೆ ಆಗಮಿಸಿದ್ದ ಕೆಎಲ್ ರಾಹುಲ್ ನಿಧಾನವಾಗಿ ಕ್ರೀಸ್ ಗೆ ಅಂಟಿಕೊಂಡು ತಮ್ಮ ಸಮಯೋಚಿತ ಬ್ಯಾಟಿಂಗ್ ಮೂಲಕ ರನ್ ಕಲೆಹಾಕುತ್ತಿದ್ದರು. ಆ ಬಳಿಕ ಸ್ಫೋಟಕ ಆಟಕ್ಕೆ ಮುಂದಾದ ಅವರು ರೋಹಿತ್ ಶರ್ಮಾ ಮತ್ತು ನಾಯಕ ಕೊಹ್ಲಿ ಜೊತೆಗೂಡಿ ತಂಡ ಮೇಲುಗೈ ಸಾಧಿಸುವಂತೆ ನೋಡಿಕೊಂಡರು. ತಂಡ ಗೆಲುವಿನ ಹೊಸ್ತಿಲಲ್ಲಿರುವಾಗ ರೋಹಿತ್ ಔಟ್ ಆಗಿದ್ದು, ಮತ್ತೆ ಭಾರತದ ಪಾಳಯದಲ್ಲಿ ಆತಂಕಕ್ಕೆ ಕಾರಣವಾಗಿತ್ತಾದರೂ ಕೊಹ್ಲಿ ಮತ್ತು ರಾಹುಲ್ ಅದಕ್ಕೆ ಆಸ್ಪದ ನೀಡಲಿಲ್ಲ.
ಕೇವಲ 18.2 ಓವರ್ ಗಳಲ್ಲಿಯೇ ಟೀಂ ಇಂಡಿಯಾ 163 ರನ್ ಗಳನ್ನು ಕಲೆಹಾಕಿ ಜಯಭೇರಿ ಭಾರಿಸಿತು.