ಐಸಿಸಿ ಹಾಲ್ ಆಫ್ ಫೇಮ್ ಗೆ “ದಿ ವಾಲ್” ಆಫ್ ಕ್ರಿಕೆಟ್ ದ್ರಾವಿಡ್ ಸೇರ್ಪಡೆ

ವೆಲ್ಲಿಂಗ್ಟನ್: ಶ್ರೇಷ್ಠ ಕ್ರಿಕೆಟಿಗರ ಸಾಧನೆಯನ್ನು ಗುರುತಿಸುವ ಐಸಿಸಿ ಹಾಲ್ ಆಫ್ ಫೇಮ್ ಗೆ ಇಂಡಿಯನ್ ಕ್ರಿಕೆಟ್ ನ ದಿ ವಾಲ್ ಎಂದೇ ಖ್ಯಾತರಾಗಿರುವ ರಾಹುಲ್ ದ್ರಾವಿಡ್ ಅವರನ್ನು ಆಯ್ಕೆ ಮಾಡಲಾಗಿದೆ.
ರಾಹುಲ್ ದ್ರಾವಿಡ್ ಅವರೊಂದಿಗೆ ಆಸ್ಟ್ರೇಲಿಯಾ ಆಟಗಾರರಾದ ಪಾಂಟಿಂಗ್, ಇಂಗ್ಲೆಂಡ್ ನ ಮಹಿಳಾ ಕ್ರಿಕೆಟ್ ತಂಡದ ವಿಕೆಟ್ ಕೀಪರ್  ಕ್ಲೇರ್ ಟೇಲರ್ ಅವರನ್ನೂ ಸೇರ್ಪಡೆಗೊಳಿಸಲಾಗಿದೆ. ಭಾರತದಿಂದ ಐಸಿಸಿ ಹಾಲ್ ಆಫ್ ಫೇಮ್ ಗೆ ಸೇರ್ಪಡೆಗೊಳ್ಳುತ್ತಿರುವ 5 ನೇ ಆಟಗಾರ ರಾಹುಲ್ ದ್ರಾವಿಡ್ ಆಗಿದ್ದು, 2009 ರಲ್ಲಿ ಬಿಶನ್ ಸಿಂಗ್ ಬೇಡಿ, ಸುನಿಲ್ ಗವಾಸ್ಕರ್, ಕಪಿಲ್ ದೇವ್, 2015 ರಲ್ಲಿ ಅನಿಲ್ ಕುಂಬ್ಳೆ ಐಸಿಸಿ ಹಾಲ್ ಆಫ್ ಫೇಮ್ ಗೆ ಸೇರ್ಪಡೆಗೊಂಡಿದ್ದರು.
ಈ ಖ್ಯಾತಿಗೆ ಪಾತ್ರರಾಗುತ್ತಿರುವ ಭಾರತದ 5 ನೇ ಕ್ರಿಕೆಟಿಗ ದ್ರಾವಿಡ್ ಆಗಿದ್ದರೆ, ರಿಕಿ ಪಾಂಟಿಂಗ್ ಆಸ್ಟ್ರೇಲಿಯಾದ 25 ನೇ ಕ್ರಿಕೆಟಿಗರಾಗಿದ್ದು, ಕ್ಲೇರ್ ಟೇಲರ್ ಇಂಗ್ಲೆಂಡ್ ನ 7 ನೇ ಆಟಗಾರರಾಗಿದ್ದು ಮಹಿಳಾ ವಿಭಾಗದ ಮೂರನೇ ಆಟಗಾರರಾಗಿದ್ದಾರೆ.
ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರ ಪಟ್ಟಿಯಲ್ಲಿ ಗುರುತಿಸಲ್ಪಡುವ ಐಸಿಸಿ ಹಾಲ್ ಆಫ್ ಫೇಮ್ ನಲ್ಲಿ ಸೇರ್ಪಡೆಗೊಳ್ಳುವುದು ಕ್ರಿಕೆಟ್ ವೃತ್ತಿ ಜೀವನ  ಪ್ರಾರಂಭಿಸಿದಾಗಿನ ಕನಸಾಗಿರುತ್ತದೆ, ನನ್ನ ಕ್ರಿಕೆಟ್ ಜೀವನದ ಪ್ರತಿ ಕ್ಷಣವನ್ನೂ ನಾನು ಪ್ರೀತಿಸಿದ್ದೇನೆ ತಂಡ ಹಾಗೂ ನನ್ನ ವೈಯಕ್ತಿಕ ಸಾಧನೆ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ದ್ರಾವಿಡ್ ಸಂತಸ ಹಂಚಿಕೊಂಡಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ