ಟೀಂ ಇಂಡಿಯಾದ ಕೋಚ್ ರವಿಶಾಸ್ತ್ರಿ ಜಗತ್ತಿನ ದುಬಾರಿ ಕೋಚ್, ದ್ರಾವಿಡ್ ಸಹ ಕಡಿಮೆಯಿಲ್ಲ!

ಮುಂಬೈ: ಟೀಂ ಇಂಡಿಯಾದ ಕೋಚ್ ರವಿಶಾಸ್ತ್ರಿ ಹಾಗೂ ಭವಿಷ್ಯ ಟೀಂ ಇಂಡಿಯಾ ಕ್ರಿಕೆಟ್ ತಂಡದ ಯುವಕರನ್ನು ಟ್ರೈನ್ ಮಾಡುತ್ತಿರುವ ಮಾಜಿ ಕ್ರಿಕೆಟಿಗ ಕನ್ನಡಿಗ ರಾಹುಲ್ ದ್ರಾವಿಡ್ ಅವರ ಮೂರು ತಿಂಗಳ ವೇತನವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಬಿಡುಗಡೆ ಮಾಡಿದೆ.
ಕೊಹ್ಲಿ ಪಡೆಯ ಕೋಚ್ ಆಗಿರುವ ರವಿಶಾಸ್ತ್ರಿ ಕಳೆದ ಏಪ್ರಿಲ್ 18ರಿಂದ ಜುಲೈ 17ರವರೆಗೆ 1.89 ಕೋಟಿ ರುಪಾಯಿ ವೇತನ ಪಡೆದಿದ್ದಾರೆ. ಈ ಮೊತ್ತದ ಪ್ರಕಾರ ರವಿಶಾಸ್ತ್ರಿ ತಿಂಗಳಿಗೆ 63 ಲಕ್ಷ ರು. ವೇತನ ಪಡೆಯಲಿದ್ದಾರೆ.
ಇಷ್ಟೇ ಮೊತ್ತವನ್ನು ಮುಂದಿನ ಅವಧಿಯಲ್ಲೂ ತೆಗೆದುಕೊಂಡರೆ ಒಂದು ವರ್ಷಕ್ಕೆ ಸುಮಾರು 8 ಕೋಟಿಯಷ್ಟು ವೇತನವನ್ನು ಶಾಸ್ತ್ರಿ ಪಡೆಯಲಿದ್ದು ಇದು ಕ್ರಿಕೆಟ್ ಜಗತ್ತಿನಲ್ಲಿ ಪ್ರಧಾನ ಕೋಚ್ ಒಬ್ಬರು ಪಡೆದುಕೊಳ್ಳುವ ಅತೀ ಹೆಚ್ಚು ವೇತನವಾಗಲಿದೆ.
ಇನ್ನು ಟೀಂ ಇಂಡಿಯಾ ಎ ಹಾಗೂ ಅಂಡರ್ 19 ತಂಡದ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಪ್ರತಿ ತಿಂಗಳಿಗೆ 40 ಲಕ್ಷದ 50 ಸಾವಿರ ರೂ. ಪಡೆದಿದ್ದಾರೆ. ಇದೇ ಮೊತ್ತ ಮುಂದುವರಿದರೆ ದ್ರಾವಿಡ್ ಒಂದು ವರ್ಷಕ್ಕೆ 4.8 ಕೋಟಿ ವೇತನ ಪಡೆಯಲಿದ್ದಾದರೆ.
ದ್ರಾವಿಡ್ ಅವರ ತರಬೇತಿಯಲ್ಲಿ ಪ್ರಸ್ತುತ ವರ್ಷದ ಐಸಿಸಿ ಅಂಡರ್ 19 ವಿಶ್ವಕಪ್ ಅನ್ನು ಭಾರತ ಎತ್ತಿ ಹಿಡಿದಿತ್ತು. ಅಲ್ಲದೆ ದ್ರಾವಿಡ್ ಗರಡಿಯಲ್ಲಿ ಪಳಗಿರುವ ಹಲವಾರು ಯುವ ಕ್ರಿಕೆಟಿಗರು ಈ ಬಾರಿಯ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ